36. ಏತೆ ಪ್ರದೀಪಕಲ್ಪಾ: ಪರಸ್ಪರ ವಿಲಕ್ಷಣ ಗುಣವಿಶೇಷ: ।
ಕೃಸ್ತನಂ ಪುರುಷಸ್ಯಾರ್ಥ ಪ್ರಕಾಶಯ ಬುದ್ಧೌ ಪ್ರಯಚ್ಛನ್ತಿ ।।
ಒಂದು ದೀಪದಲ್ಲಿ ಹೇಗೆ ಪರಸ್ಪರ ವಿರುದ್ಧ ವಿಷಯಾತ್ಮಕವಾದ ಹಣತೆ, ಎಣ್ಣೆ, ಬತ್ತಿ, ಅಗ್ನಿ ಇವು ಒಟ್ಟಾಗಿ ದೀಪವನ್ನು ಪ್ರಕಾಶಿಸುತ್ತದೆ. ಹಾಗೆಯೇ ಕರಣವೂ ಸತ್ವ,ರಜ ಮತ್ತು ತಮೋ ಗುಣಗಳು ಪರಸ್ಪರ ವಿಲಕ್ಷಣವಿದ್ದರೂ ಗುಣ ವಿಶೇಷವಾಗಿದೆ. ಅಂದರೆ ಮೂರು ಗುಣವು ಒಟ್ಟಾಗಿ ವಿಷಯವನ್ನು ಪ್ರಕಾಶಿಸುತ್ತದೆ. ಈ ಗುಣವಿಶೇಷವು ಪುರುಷನಿಗಾಗಿಯೇ.
ಹೀಗೆ ಇಂದ್ರಿಯಗಳು ತಂದ ವಿಷಯವನ್ನು ಬುದ್ಧಿ ಪುರುಷನ ಭೋಗ ಮತ್ತು ಮೋಕ್ಷಕ್ಕಾಗಿ ಪ್ರಕಾಶಿಸುತ್ತದೆ.
37 ಸರ್ವ ಪ್ರತ್ಯುಪ ಭೋಗಂ ಯಸ್ಮಾತ್ ಪುರುಷಸ್ಯ ಸಾಧಯತಿ ಬುದ್ಧಿ: ।
ಸೈವ ಚ ವಿಶಿನಷ್ಟಿ ಪುನಃ ಪ್ರಧಾನ ಪುರುಷಾ೦ತರಂ ಸೂಕ್ಷ್ಮಮ್ ।।
ಮೂರು ಕಾಲದ ವಿಷಯಗಳನ್ನು ದೇವ, ಮನುಷ್ಯ, ತಿರ್ಯಗ್ ಗಳಿಗೆ ಬುದ್ಧೀನ್ದ್ರಿಯ ಕರ್ಮೇಂದ್ರಿಯಗಳ ಮೂಲಕ(ದ್ವಾರ) ಪುರುಷನ ಭೋಗಕ್ಕಾಗಿ ಬುದ್ಧಿಗೆ(ದ್ವಾರಿ) ಕೊಡುತ್ತದೆ. ಈ ಕಾರಣದಿಂದ ವಿಶೇಷರೂಪದಿಂದ ಪುರುಷನು ಬೇರೆ – ಪ್ರಧಾನವು ಬೇರೆಯೆಂದು ವಿಭಾಗಿಸಿ ಪುರುಷನಿಗೆ ತೋರಿಸುತ್ತದೆ. ಹಾಗು ಪುರುಷನ ನಾನತ್ವವನ್ನು ಕೂಡ ತೋರಿಸುತ್ತದೆ.
ಗೌಡಪಾದರು ಭಾಷ್ಯದಲ್ಲಿ ಹೇಳುವಂತೆ ಸೂಕ್ಷ್ಮವೆಂದರೆ ” ಅನಧಿಕೃತ ತಪಶ್ಚರನೇಹಿ ಅಪ್ರಾಪ್ಯಂ” ಅಂದರೆ ಯಾರು ತಪಸ್ಸು ಇತ್ಯಾದಿಯನ್ನು ಸರಿಯಾಗಿ ಮಾಡಿಲ್ಲವೋ ಅವರಿಗೆ ಸೂಕ್ಷ್ಮ ಅರ್ಥವಾಗುವುದಿಲ್ಲ.
ಪ್ರಕೃತಿಯು ಸತ್ವ,ರಜಸ್ ಮತ್ತು ತಮೋ ಗುಣದ ಸಾಮ್ಯಾವಸ್ಥೆಯಾಗಿದೆ. ಯಾವಾಗ ಸಾಮ್ಯತೆ ತಪ್ಪುತ್ತದೆಯೋ ಆವಾಗ ಮಹದಾದಿಯ ಸೃಷ್ಟಿಯಾಗುವುದು. ಇದರಿಂದ ಪುರುಷನು ಮಹದಾದಿಯ ವ್ಯತಿರಿಕ್ತವೆಂದು ಪುರುಷ-ಪ್ರಧಾನದ ವಿಭಾಗವನ್ನು ಪುರುಷನ ಅಪವರ್ಗಕ್ಕಾಗಿ ತೋರಿಸುತ್ತದೆ.
38 ತನ್ಮಾತ್ರಾಣ್ಯವಿಶೇಷಾ:,ತೇಭ್ಯೋ ಭೂತಾನಿ ಪಂಚ ಪಂಚಭ್ಯ: ।
ಏತೆ ಸ್ಮೃತ ವಿಶೇಷಾ: ಶಾಂತಾ ಘೋರಾ ಮೂಡಶ್ಚ ।।
ಯಾವ ತನ್ಮಾತ್ರೆ ಅಹಂಕಾರದಿಂದ ಉತ್ಪಾತ್ತಿಯಾಗುತ್ತದೆ. ಅದು ಯಾವುದು? ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವು ಐದು ತನ್ಮಾತ್ರೆಗಳು.ಇದನ್ನೇ ‘ಅವಿಶೇಷ’ ಎನ್ನುತ್ತಾರೆ. ದೇವತೆಗಳಿಗೆ ಇವು ಸುಖ ಜನಕವಾಗಿದೆ. ಮತ್ತು ದೇವತೆಗಳಿಗೆ ದುಃಖ ಮತ್ತು ಮೋಹ ರಹಿತವಾಗಿದೆ. ಈ ಐದು ಅವಿಶೇಷ ತನ್ಮಾತ್ರೆಗಳಿಂದ ಪಂಚ ಭೂತಗಳ ಸೃಷ್ಟಿಯಾಗಿದೆ. ಪೃಥ್ವಿ,ಅಪ , ತೇಜ, ವಾಯು ಮತ್ತು ಆಕಾಶ ಇವು ಪಂಚಭೂತಗಳು.ಇದನ್ನೇ ‘ವಿಶೇಷ’ವೆನ್ನುವರು.ಇದರಲ್ಲಿ ವಿಶೇಷವೇನು ಎಂದರೆ?ಪೃಥ್ವಿಯಲ್ಲಿ ಗಂಧವು, ನೀರಿನಲ್ಲಿ ರಸತನ್ಮಾತ್ರೆ, ರೂಪತನ್ಮಾತ್ರೆಯು ಬೆಂಕಿಯಲ್ಲಿ, ಸ್ಪರ್ಶ ತನ್ಮಾತ್ರೆ ವಾಯುವಿನಲ್ಲಿ ಶಬ್ದ ತನ್ಮಾತ್ರೆ ಆಕಾಶದಲ್ಲಿ ಇವೇ ವಿಶೇಷವು.
ಈ ವಿಶೇಷವು ಮನುಷ್ಯರ ವಿಷಯವಾಗಿದೆ. ಶಾಂತವು ಸುಖ ಲಕ್ಷಣವು, ಘೋರವು ದುಃಖ ಲಕ್ಷಣವು ಮೂಡತೆ ಮೋಹ ಲಕ್ಷಣವು ಆಗಿದೆ.
ಉದಾ: ಆಕಾಶವು ಕೆಲವೊಮ್ಮೆ ಸುಖಜನಕವಾಗಿಯೂ ಅದೇ ಆಕಾಶವು ಕಾಡಿನಲ್ಲಿ ಮೋಹ ಜನಕವಾಗಿಯೂ ತೋರುತ್ತದೆ.ಹೀಗೆ ಅನ್ಯವಿಶೇಷವು ಕೂಡ ಆಗಿದೆ.
39. ಸೂಕ್ಷ್ಮಾ ಮಾತಾಪಿತೃಜಾ: ಸಹ ಪ್ರಭೂತೈಸ್-ತ್ರಿಥಾ ವಿಶೇಷಾ: ಸ್ಯು: ।
ಸೂಕ್ಶ್ಮಾಸ್ತೇಷಾ೦ ನಿಯತಾ: ಮಾತಾಪಿತೃಜಾ ನಿವರ್ತನ್ತೇ ।।
ಸೂಕ್ಷ್ಮ ಶರೀರವು ತನ್ಮಾತ್ರೆಗಳಿಂದ ಆಗಿದೆ. ಇದು ಮಹದಾದಿ ಲಿಂಗದಿಂದ ಆಗಿದೆ. ಹಾಗು ಸೂಕ್ಷ್ಮ ಶರೀರವು ಯಾವಾಗಲೂ ಇರುತ್ತದೆ.(ಅಂದರೆ ಇಲ್ಲಿ ಲಯದ ವರೆಗೆ ಎಂದರ್ಥ).
ಮಾತಾ-ಪಿತರು ಸ್ಥೂಲ ಶರೀರದ ಜನಕರು. ಮಾತೆಯ ಋತುಕಾಲದಲ್ಲಿ, ಮಾತಾ-ಪಿತರ ಸಂಯೋಗದಿಂದ ಶೊನಿತ-ಶುಕ್ರದ ಸಂಯೋಗವಾದಾಗ ಉದರದ ಒಳಗಡೆ ಸೂಕ್ಷ್ಮ ಶರೀರದೊಂದಿಗೆ ಸಂಬಂಧ ಉಂಟಾಗುತ್ತದೆ. ಉದರದಲ್ಲಿರುವ ಶರೀರವು ತಾಯಿಯ ಊಟದ ರಸವನ್ನು ನಾಭಿಯ ಮೂಲಕ ಅನುಭವಿಸುತ್ತದೆ. ಪ್ರಾರಬ್ಧವಶಾತ್ ಮಾತಾ-ಪಿತರ ಸಂಯೋಗದಿಂದ ಸ್ಥೂಲ ಶರೀರವು ಅದರ ಅವಯವಗಳು ಪ್ರಾಪ್ತಿಯಾಗುತ್ತದೆ.
ಸ್ಥೂಲ ಶರೀರವು ಪಂಚ ಮಹಾಭೂತಗಳ ಮಿಶ್ರಣದಿಂದಲೇ ಆಗಿವೆ. ಆಕಾಶವು ಅವಕಾಶ ಪ್ರಧಾನವು ಅಂದರೆ ಶರೀರವಿರಲು ಅವಕಾಶ(ಜಾಗ) ಕೊಡುತ್ತದೆ. ವಾಯು ವರ್ಧನಾತ್ ಅಂದರೆ ಶರೀರವನ್ನು ಬೆಳೆಸುತ್ತದೆ. ತೇಜ ಪಾಕಾತ್ ಅಂದರೆ ಊಟವನ್ನು ಪಕ್ವ ಮಾಡಿ ಅದರ ರಸವನ್ನು ಎಲ್ಲಡೆ ಕಳುಹಿಸುತ್ತದೆ. ‘ಅಪ: ಸಂಗ್ರಹಾತ್’ ಅಂದರೆ ಎಲ್ಲವನ್ನು ಸೇರಿಸುವ ಕೆಲಸ ಮಾಡುತ್ತದೆ. ಪೃಥ್ವಿ ಧಾರಣತ್’ ಅಂದರೆ ಶರೀರವಿರುವ ಸ್ಥಳವನ್ನು ಕೊಡುತ್ತದೆ.
ಹೀಗೆ ಮಾತೆಯ ಉದರದಿಂದ ಅವಯವ ಸಹಿತವಾಗಿ ಹೊರ ಬರುತ್ತದೆ. ಇದೇ ಮೂರು ಪ್ರಕಾರದ ವಿಶೇಷವಾಗಿದೆ. ಹಾಗಾದರೆ ಇದರಲ್ಲಿ ನಿತ್ಯ ಯಾವುದು ಅನಿತ್ಯ ಯಾವುದು? ಸೂಕ್ಷ್ಮವು ನಿಯತವಾದ್ದರಿಂದ ಅದು ನಿತ್ಯವು. ಪ್ರಾರಬ್ಧವಶದಿಂದ ಬೇರೆ ಬೇರೆ ಜಾತಿಯ (ಮನುಷ್ಯ, ಪಶು,ಸರ್ಪ) ಶರೀರವನ್ನು ಪಡೆಯುತ್ತದೆ. ಧರ್ಮವಶದಿಂದ(ಪುಣ್ಯ)ಇಂದ್ರಾದಿ ಲೋಕವನ್ನು ಹೊಂದುತ್ತದೆ. ಧರ್ಮದಿಂದ ಊರ್ಧ್ವಲೋಕವನ್ನು ಅಧರ್ಮದಿಂದ ಅಧೋ ಲೋಕವನ್ನು ಹೊಂದುತ್ತದೆ. ಹೀಗೆ ಸೂಕ್ಷ್ಮ ಶರೀರವು ನಿತ್ಯರೂಪವಾಗಿ ಸಂಸಾರದಲ್ಲಿರುತ್ತದೆ. ಯಾವಾಗ ಜ್ಞಾನ ಪ್ರಾಪ್ತಿಯಾಗುವುದೋ ಆಗ ಶರೀರವನ್ನು ತ್ಯಜಿಸಿ ಮೋಕ್ಷಪ್ರಾಪ್ತಿಯಾಗುತ್ತದೆ. ಆದ್ದರಿಂದ ಸೂಕ್ಷ್ಮವು ನಿತ್ಯವು. ಯಾವಾಗ ಸೂಕ್ಷ್ಮ ಶರೀರವು ಪರಿತ್ಯಾಗ ಮಾಡುವುದು ಆಗ ಮಾತಾ-ಪಿತರಿಂದ ಹುಟ್ಟಿದ ಸ್ಥೂಲ ಶರೀರವು ನಶಿಸಿ ಹೋಗುತ್ತದೆ. ಸ್ಥೂಲ ಶರೀರ ಯಾವ ಯಾವ ತತ್ವದಿಂದ ಸೃಷ್ಟಿಯಾಗಿದೆಯೋ ಆ ತತ್ವದಲ್ಲೇ ಲಯ ಹೊಂದುತ್ತದೆ.
ಹಾಗಾದರೆ ಸೂಕ್ಷ್ಮವು ಹೇಗೆ ಸಂಸಾರದಲ್ಲಿ ಸಿಕ್ಕಿ ಕೊಳ್ಳುತ್ತದೆ ?
40. ಪೂರ್ವೋತ್ಪನ್ನಂ ಅಸಕ್ತಮ್ ನಿಯತಂ ಮಹದಾದಿ ಸೂಕ್ಷ್ಮ ಪರ್ಯಂತಮ್ ।
ಸಂಸರತಿ ನಿರುಪ ಭೋಗಂ ಭಾವೈರಧಿವಾಸಿತಂ ಲಿಂಗಮ್ ।।
ಯಾವಾಗ ಲೋಕದ ಸೃಷ್ಟಿಯಾಗಿಲ್ಲವೋ ಆವಾಗ ಪ್ರಧಾನವು ಆದಿಯಾಗಿ ಸೂಕ್ಷ್ಮ ಶರೀರವನ್ನು ಉತ್ಪತ್ತಿ ಮಾಡುತ್ತದೆ. ಈ ಸೂಕ್ಷ್ಮ ಶರೀರವು ಯಾವುದಕ್ಕೂ (ದೇವ, ಮನುಷ್ಯ, ತಿರ್ಯಗ್) ಸಂಬಂಧ ಹೊಂದಿರುವುದಿಲ್ಲ. ಆದ್ದರಿಂದ ಅದು ಅಸಕ್ತವು.
ನಿಯತಂ – ಯಾವ ಜೀವಕ್ಕೆ ಜ್ಞಾನ ಪ್ರಾಪ್ತಿಯಾಗಿಲ್ಲವೋ ಆದರೆ ವೈರಾಗ್ಯ ಪ್ರಾಪ್ತಿಯಾಗಿದೆಯೋ ಅದಕ್ಕೆ ಲಯ ಪ್ರಾಪ್ತಿಯಾಗುತ್ತದೆ ಅಂದರೆ ಜಡ ರೂಪವಾಗಿ ಎಲ್ಲಾದರೂ ಸ್ಥಿತಿ ಹೊಂದುತ್ತದೆ. ಉದಾ:ಬಂಡೆ .
ಬರಿಯ ಸೂಕ್ಷ್ಮ ಶರೀರ ಹೊಂದಿರುವ ಜೀವವು ಬಿರುಗಾಳಿಯಲ್ಲಿ ಸಿಕ್ಕಿ ಕಾಗದದ ಚೂರಿನಂತೆ ಅಲೆದಾಡುತ್ತಿರುತ್ತದೆ. ಆ ಜೀವವು ಯಾವುದೇ ರೀತಿಯ ಭೋಗ ಸಾಮರ್ಥ್ಯ ಹೊಂದಿರುವುದಿಲ್ಲ. ಯಾವಾಗ ಮಾತಾ-ಪಿತರ ಸಂಯೋಗದಿಂದ ಈ ಸೂಕ್ಷ್ಮ ಶರೀರವು ಸ್ಥೂಲ ಶರೀರದೊಂದಿಗೆ ಸಂಬಂಧ ಉಂಟಾಗುವುದೋ ಆಗ ಅದಕ್ಕೆ ಭೋಗ ಸಾಮರ್ಥ್ಯ ಬರುತ್ತದೆ.
ಧರ್ಮ,ಜ್ಞಾನ,ವೈರಾಗ್ಯ ಮತ್ತು ಐಶ್ವರ್ಯ ಭಾವಗಳೊಂದಿಗೂ ಹಾಗು ಇದರ ವಿಪರೀತ ಭಾವದೊಂದಿಗೂ ಸಂಬಂಧ ಹೊಂದುತ್ತದೆ.
ಪ್ರಳಯ ಕಾಲದಲ್ಲಿ ಸೂಕ್ಷ್ಮ ಶರೀರವು ಪ್ರಧಾನದಲ್ಲಿ ಲಯ ಹೊಂದುತ್ತದೆ. ಪ್ರಳಯವಾದ ಮೇಲೆ ಯಾವುದೇ ರೀತಿಯ ಪ್ರವೃತ್ತಿ ಹೊಂದಲು ಸಾಧ್ಯವಿಲ್ಲ ಏಕೆಂದರೆ ಪ್ರಧಾನದ ತಾಮಸಾವರಣವು ಅಧಿಕವಾಗಿರುತ್ತದೆ. ಸರ್ಗ ಕಾಲದಲ್ಲಿ ಮತ್ತೆ ಪ್ರವೃತ್ತಿ ಹೊಂದುತ್ತದೆ.
ಈ ೧೩ ಕರಣಗಳು ಪ್ರವೃತ್ತಿ ಹೊಂದಲು ಏನು ಕಾರಣವು?