सर्व दर्शन निष्णातं वेदान्त मार्गदर्शकम् |
शिष्योपदेश निरतं रामकृष्णाय ते नमः ||
ಸರ್ವ ದರ್ಶನ ನಿಷ್ಣಾತಂ ವೇದಾಂತ ಮಾರ್ಗದರ್ಶಕಮ್।
ಶಿಷ್ಯೋಪದೇಶ ನಿರತಂ ರಾಮಕೃಷ್ಣಾಯ ತೇ ನಮಃ ॥
ಶ್ರೀವಿಷ್ಣುಸಹಸ್ರನಾಮವು ದೇಶಾದ್ಯಂತ ಪಠಿಸಲ್ಪಡುವ ಅತ್ಯಂತ ಪ್ರಿಯವಾದ ಗ್ರಂಥವಾಗಿದೆ. ಕೆಲವರು ಬರಿಯ ಸಹಸ್ರನಾಮ ಎಂದು ಹೇಳಿದಾಗ ಅದು ಶ್ರೀವಿಷ್ಣುಸಹಸ್ರನಾಮವೇ ಎಂದು ಭಾವಿಸುತ್ತಾರೆ. ಬೇರೆ ಬೇರೆ ದೇವತೆಗಳಿಗೆ ಬೇರೆ ಬೇರೆ ಸಹಸ್ರನಾಮಗಳಿವೆ. ಶ್ರೀವಿಷ್ಣುವಿಗೂ ಕೂಡ ಬೇರೆ ಸಹಸ್ರನಾಮಗಳು ಶ್ರೀವಿಷ್ಣುಪುರಾಣದಲ್ಲಿ ದೊರಕುತ್ತದೆ. ಪ್ರಸ್ತುತ ಸಹಸ್ರನಾಮವು ಮಹಾಭಾರತದಲ್ಲಿ ಬರುವಂತದ್ದಾಗಿದೆ.
ಇತರ ಸಹಸ್ರನಾಮಗಳಲ್ಲಿ, ಇದು ಅತ್ಯಂತ ಸರಳ ಮತ್ತು ಲಯಬದ್ಧವಾಗಿದೆ. ಲಲಿತಾ ಸಹಸ್ರನಾಮವು ಲಯಬದ್ಧವಾಗಿದ್ದರೂ, ಅದನ್ನು ಉಚ್ಚರಿಸಲು ಸ್ವಲ್ಪ ಕಷ್ಟ. ಮತ್ತು ಶಿವ ಸಹಸ್ರನಾಮವು ಉಚ್ಚರಿಸಲು ಕಷ್ಟವಲ್ಲದಿದ್ದರೂ ಶ್ರೀವಿಷ್ಣುಸಹಸ್ರನಾಮದ ರೀತಿ ಲಯವಿಲ್ಲದ ಕಾರಣ ಅದನ್ನು ನೆನಪಿಟ್ಟುಕೊಳ್ಳುವುದು ಕಷ್ಟಕರವಾಗಿದೆ.
ಈ ಗ್ರಂಥವನ್ನು ಶ್ರೀ ಆದಿ ಶಂಕರಾಚಾರ್ಯರು ಬರೆದ ಭಾಷ್ಯದ ಮೂಲಕ ನೋಡೊಣ. ಇದಕ್ಕೆ ಪೂರಕವಾಗಿ ಶ್ರೀ ತಾರಕ ಬ್ರಹ್ಮಾನಂದ ಸರಸ್ವತಿಯವರ ವೃತ್ತಿ ಮತ್ತು ವಿಶಿಷ್ಟಾದ್ವೈತಿಗಳಾದ ಶ್ರೀ ಪರಾಶರ ಭಟ್ಟರ ಭಾಷ್ಯವನ್ನು ಸಹ ಬಳಕೆ ಮಾಡಿಕೊಳ್ಳೋಣ. ಏಕೆಂದರೆ, ಈ ಗ್ರಂಥದ ಪ್ರತಿಯೊಂದು ವಾಕ್ಯವು ಅದ್ವೈತವನ್ನೇ ಸಾರುತ್ತಿದ್ದರೂ, ದ್ವೈತದಲ್ಲಿ ಹೇಗೆ ಅರ್ಥೈಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗಿವೆ. ಉದಾಹರಣೆಗಾಗಿ, ವಿಷ್ಣು ಶಬ್ದಕ್ಕೆ ದ್ವೈತದಲ್ಲಿ ಪರಮ ದೈವ ಎಂದು ಅರ್ಥೈಸಿದರೆ ಅದ್ವೈತದಲ್ಲಿ ‘ವಿರ್ಷ್ಲರ್ ವ್ಯಾಪ್ತೌ’ ಅಂದರೆ ಸರ್ವವ್ಯಾಪಿ (ಅದ್ವೈಬ್ರಹ್ಮ) ಎಂದು ಅರ್ಥೈಸುತ್ತಾರೆ.
ಭಗವಾನ್ ಭಾಷ್ಯಕಾರ ಶಂಕರರು ಈ ವಿಷಯವನ್ನು ಮಂಗಳಾಚರಣ ಶ್ಲೋಕದಲ್ಲೇ “ಸಚ್ಚಿದಾನಂದರೂಪಾಯ ಕೃಷ್ಣಾಯಾಕ್ಲಿಷ್ಟಕಾರಿಣೇ ನಮೋ ವೇದಾಂತವೇದ್ಯಾಯ ಗುರವೇ ಬುದ್ಧಿಸಾಕ್ಷಿಣೇ” ಎಂದು ಹೇಳುವ ಮೂಲಕ ಪ್ರತಿಪಾದಿಸಿರುತ್ತಾರೆ. ಕೃಷ್ಣನೆಂದರೆ ಸತ್ ಚಿತ್ ಆನಂದ ರೂಪನಾದ ಮತ್ತು ಯಾರನ್ನು ವೇದಾಂತದ ಉಪನಿಷದ್ ವಾಕ್ಯಗಳ ಮೂಲಕವೇ ತಿಳಿದುಕೊಳ್ಳಲು ಸಾಧ್ಯವೋ ಅಂತಹ ಪರಬ್ರಹ್ಮ.
ಉಪನಿಷತ್ತಿನಲ್ಲೇ ಹೇಳಿರುವಂತೆ ‘ತಂ ತು ಔಪನಿಷದಂ ಪುರುಷಂ ಪೃಚ್ಛಾಮಿ’ ಅಂದರೆ, ನಾನು ಉಪನಿಷತ್ತಿನಲ್ಲಿ ಪ್ರತಿಪಾದಿತವಾದ ಆತ್ಮನ ಬಗ್ಗೆ ಕೇಳುತ್ತಿದ್ದೇನೆ. ಹಾಗದರೆ, ಉಪನಿಷತ್ತಿನ ಮೂಲಕವೇ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಈ ಭಾಷ್ಯವನ್ನು ಅಧ್ಯಯನ ಮಾಡುವುದರಿಂದ ಅಥವಾ ಶ್ರೀವಿಷ್ಣುಸಹಸ್ರನಾಮವನ್ನು ಜಪಿಸುವುದರಿಂದ ಏನು ಪ್ರಯೋಜನ? ಉಪನಿಷತ್ತಿನಲ್ಲಿ ವಿವರಿಸಿರುವ ಎಲ್ಲವನ್ನು ಭಾಷ್ಯದಲ್ಲಿ ಪ್ರತಿಪಾದಿಸಿದ್ದಾರೆ ಮತ್ತು ಜಪದಿಂದ ವೇದಾಂತಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಅರ್ಹತೆ ಪಡಯಬಹುದಾಗಿದೆ. ಸನಾತನ ಧರ್ಮವು ಎಲ್ಲರಿಗೂ ಒಂದೇ ರೀತಿಯ ಉಪದೇಶ ಮಾಡುವುದಿಲ್ಲ, ಅವರವರ ಅರ್ಹತೆ ಮತ್ತು ಅಧಿಕಾರಕ್ಕೆ ತಕ್ಕಂತೆ ಪಾಠ ಭೇದವಿರುತ್ತದೆ.
ಯಾರಿಗೆ ಶ್ರವಣ ಮತ್ತು ಮನನ ಮಾಡುವ ಯೋಗ್ಯತೆ ಇರುತ್ತದೆಯೋ ಅಂತವರಿಗೆ ನೇರವಾಗಿ ಉಪನಿಷತ್ತನ್ನು ಉಪದೇಶಿಸಿದರೆ, ಅಧ್ಯಯನ ಮಾಡಲು ಈ ಏಕಾಗ್ರತೆ ಕೊರತೆಯಿದ್ದವರಿಗೆ ವೇದ ಕರ್ಮಗಳನ್ನು ಮಾಡುವಂತೆ ಸೂಚಿಸುತ್ತದೆ, ಅವುಗಳನ್ನು ಮಾಡಲು ಅರ್ಹರಲ್ಲದವರಿಗೆ, ಗುರುಗಳಿಂದ ಉಪದೇಶಿಸಲ್ಪಟ್ಟ ಮಂತ್ರವನ್ನು ಜಪಿಸುವಂತೆ ಸೂಚಿಸುತ್ತದೆ, ಅದೂ ಸಾಧ್ಯವಿಲ್ಲದವರಿಗೆ ಮಂತ್ರವನ್ನು ಶ್ಲೋಕರೂಪದಲ್ಲಿ ಈ ಗ್ರಂಥದಲ್ಲೆ ಶಿವನು ಪಾರ್ವತಿಗೆ ಉಪದೇಶಿಸಿದ ‘ಶ್ರೀ ರಾಮ ರಾಮೇತಿ’ ತರಹದ ಶ್ಲೋಕವನ್ನು ಉಪದೇಶಿಸಲ್ಪಡುತ್ತದೆ. ಶ್ಲೋಕ ರೂಪವನ್ನು ಮಾಡಲು ಸಾಧ್ಯವಾಗದಿದ್ದಾಗ, ಸಹಸ್ರನಾಮದಂತಹ ಗ್ರಂಥ ಪಠಣವನ್ನು ಸೂಚಿಸಲಾಗುತ್ತದೆ.ಇದನ್ನು ಮಾಡಲು ಸಾಧ್ಯವಾಗದಿದ್ದಾಗ, ಭಜನೆಗಳು, ಭಕ್ತಿಗೀತೆಗಳನ್ನು ಹಾಡಲು ಸೂಚಿಸಲಾಗುತ್ತದೆ.ಇದನ್ನೂ ಮಾಡಲು ಅಸಮರ್ಥರಾದಾಗ, ಗುರು ಅಥವಾ ದೇವರಿಗೆ ಸೇವೆ ಸಲ್ಲಿಸಲು ಸೂಚಿಸಲಾಗುತ್ತದೆ.
ಈ ನಾಮಗಳನ್ನು ಉಚ್ಚರಿಸುವಾಗ ನಾವು ಅತ್ಯಂತ ಜಾಗರೂಕತೆಯಿಂದ ಮತ್ತು ಶ್ರದ್ಧೆಯಿಂದ ಉಚ್ಚಾರಿಸಬೇಕು. ಉದಾಹರಣೆಗಾಗಿ : ಒಬ್ಬಳೇ ದೇವಿಯು ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾಳೆ — ಜ್ಞಾನಕ್ಕಾಗಿ ಸರಸ್ವತಿ, ಐಶ್ವರ್ಯಕ್ಕಾಗಿ ಲಕ್ಷ್ಮಿ, ಶಕ್ತಿಗಾಗಿ ದುರ್ಗೆ — ಹೀಗೆಯೇ ಪ್ರತಿ ನಾಮವು ನಿರ್ದಿಷ್ಟ ರೂಪಕ್ಕೆ ಅನುಗುಣವಾಗಿ ಪರಿಣಾಮ ಬೀರುತ್ತದೆ. ರೂಪ ಬದಲಾಗಿದರೆ ನಾಮ ಬದಲಾಗುತ್ತದೆ; ನಾಮ ಬದಲಾಗಿದರೆ ರೂಪ ಹಾಗೂ ಫಲವೂ ಬದಲಾಗುತ್ತದೆ. ಉದಾಹರಣೆಗೆ, ‘ನಮಃ ಶಿವಾಯ’ ಎಂಬ ಮಂತ್ರ ನಿರ್ದಿಷ್ಟ ಫಲ ನೀಡುತ್ತದೆ, ಆದರೆ ಅದನ್ನು ‘ಶಿವಾಯ ನಮಃ’ ಅಥವಾ ‘ಮನಃ ಶಿವಾಯ’ ಅಥವಾ ಹಾಗು ಬೇರೆ ಕ್ರಮದಲ್ಲಿ ಉಚ್ಚರಿಸಿದರೆ ವಿಭಿನ್ನಪರಿಣಾಮಗಳನ್ನೂಂಟುಮಾಡಬಹುದು. ಆದ್ದರಿಂದ, ಉಚ್ಚರಣೆ ಹಾಗೂ ಪದಗಳ ಕ್ರಮದಲ್ಲಿ ನಿಖರತೆ ಅತ್ಯಂತ ಮುಖ್ಯವಾದದ್ದು.
ಶ್ರೀವಿಷ್ಣುಸಹಸ್ರನಾಮ ಜಪದ ಫಲ ಅನೇಕವಾಗಿದೆ. ಅವು ವ್ಯಕ್ತಿಯ ವರ್ಣ, ಆಶ್ರಮ, ಪುರುಷಾರ್ಥ (ಧರ್ಮ, ಅರ್ಥ, ಕಾಮ, ಮೋಕ್ಷ) ಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಮಿಮಾಂಸಾ ಶಾಸ್ತ್ರಕಾರರು ಇದನ್ನು ದೋಷ ವೆಂದು ಪರಿಗಣಿಸುತ್ತಾರೆ. ಒಂದು ಕರ್ಮ ಅನೇಕ ಫಲಗಳನ್ನು ಕೊಡುವುದು ಅಥವಾ ಅನೇಕ ಕರ್ಮಗಳು ಒಂದು ಫಲವನ್ನು ಕೊಡುವುದಕ್ಕೆ ‘ವಾಕ್ಯ ಭೇದ’ ದೋಷ ವೆನ್ನುತ್ತಾರೆ. ಆದರೆ, ಇಲ್ಲಿ ಅದು ಅನ್ವಯಿಸುವುದಿಲ್ಲ. ಉದಾ : ಭಗವದ್ಗೀತೆಯನ್ನು ಭಕ್ತಿ (ಭಗವದ್ಭಕ್ತಿ), ಜ್ಞಾನ (ತತ್ತ್ವಜ್ಞಾನ), ಅಥವಾ management ಗ್ರಂಥವೆಂದು ನೋಡುವಂತೆ ಅಥವಾ ತುಳಸಿ ರಾಮಾಯಣವನ್ನು ಭವಿಷ್ಯವಾಣಿ ಗ್ರಂಥವೆಂದು ನೋಡುವಂತೆ, ಅಥವಾ ಹನುಮಾನ್ ಚಾಲೀಸಾದ ಕೆಲವೊಂದು ಶ್ಲೋಕವನ್ನು ಭೂಮಿ, ಚಂದ್ರ ಮತ್ತು ಸೂರ್ಯನ ನಡುವಿನ ಖಗೋಳೀಯ ದೂರಗಳ ಕುರಿತು ವಿವರಣೆ ಮಾಡಿರುವಂತೆ, ಒಂದೇ ಪಾಠವನ್ನೂ ವಿವಿಧ ದೃಷ್ಟಿಕೋನ ಮತ್ತು ಅಭಿಪ್ರಾಯಗಳ ಆಧಾರದಲ್ಲಿ ಹಲವು ಅರ್ಥಗಳು ಹಾಗೂ ಫಲಗಳಿಗಾಗಿ ಬಳಸಬಹುದು ಎಂಬುದು ಸ್ಪಷ್ಟವಾಗಿದೆ. ಇದೇ ರೀತಿ, ಈ ಶ್ರೀವಿಷ್ಣುಸಹಸ್ರನಾಮ ಜಪದ ಫಲವನ್ನೂ ಅನೇಕ ರೀತಿಯಲ್ಲಿ ನೋಡಬಹುದಾಗಿದೆ.
ಈ ವಿಚಾರವನ್ನು ಯೋಗದ ದೃಷ್ಟಿಕೋನದಿಂದ ನೋಡಿದರೆ, ಶ್ಲೋಕದಲ್ಲಿರುವ ಅಲ್ಪಪ್ರಾಣ ಮತ್ತು ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸಿದರೆ ಸ್ವಾಭಾವಿಕ ಪ್ರಾಣಾಯಾಮ ತಂತ್ರವೊಂದು ಅಂತರ್ನಿಹಿತವಾಗಿರುವುದು ಸ್ಪಷ್ಟವಾಗುತ್ತದೆ. ಪ್ರಸಿದ್ಧ ಗುರುಗಳಾದ ಶ್ರೀ ಅನಂತಕೃಷ್ಣ ಶಾಸ್ತ್ರಿಯವರು ವಿಷ್ಣುಸಹಸ್ರನಾಮದ ಕೆಲ ಶ್ಲೋಕಗಳನ್ನು ಉದಾಹರಣೆಯಾಗಿ ತೆಗೆದುಕೊಂಡು, ಅದರಲ್ಲಿರುವ ಲೌಕಿಕ ವಿಚಾರಗಳನ್ನು ತೋರಿಸಿಕೊಟ್ಟಿದ್ದಾರೆ.
೧. ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮಿ ತ್ರಿಲೋಕಧೃಕ್ (೮೦)
ಅಮಾನೀ – ಅಹಂಕಾರವಿಲ್ಲದವನು,
ಮಾನದಃ – ಇತರರನ್ನು ಗೌರವಿಸುವವನು, ಮಾನ್ಯಃ – ಇತರರಿಂದ ಗೌರವಿಸಲ್ಪಡುವವನು, ಲೋಕಸ್ವಾಮಿ – ಪ್ರಪಂಚದ ಒಡೆಯ, ಮತ್ತು ತ್ರಿಲೋಕಧೃಕ್ – ಮೂರು ಲೋಕಗಳ ಒಡೆಯನಾಗುತ್ತಾನೆ.
೨.ಮಹೇಶ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಮ್ ಗತಿಃ (೨೦)
ಮಹೇಶ್ವಾಸಃ -ಬಾಣ ಇತ್ಯಾದಿ ಆಯುಧಗಳನ್ನು ಪ್ರಯೋಗಿಸುವಲ್ಲಿ ನಿಪುಣನಾದವನು, ಮಹೀಭರ್ತಾ – ಒಬ್ಬ ಮಹಾನ್ ರಾಜನಂತೆ ಕಾಣಲ್ಪಡುವವ, ಶ್ರೀನಿವಾಸಃ – ಲಕ್ಷ್ಮೀಯ ಒಡೆಯ, ಮತ್ತು ಸತಾಮ್ ಗತಿಃ – ಸದ್ಗುಣಶೀಲ ಜನರಿಗೆ ಆಶ್ರಯ ಕೊಡುವವ.
೩.ಅಗ್ರಶಿರ್ ಗ್ರಾಮಶಿಃ ಶ್ರೀಮಾನ್ ನ್ಯಾಯೋ ನೇತಾ ಸಮೀರಶಾಃ (24) –
ಅಗ್ರಶಿಃ ಜನರಲ್ಲಿ ಅಗ್ರಗಣ್ಯ, ಗ್ರಾಮಶಿಃ-ಗ್ರಾಮದ ನಾಯಕ, ನ್ಯಾಯಃ – ಕಾನೂನುಬದ್ಧ, ನೇತಾ-ನಾಯಕ, ಸಮಿರಾಶಃ – ಮಮಕಾರ ಭೇದ ಇಲ್ಲದೆ ವರ್ತಿಸುವವ, ಶ್ರೀಮಾನ್- ಎಲ್ಲರೂ ಹೊಗಳುವಂತಹ.
೪. ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ (31)
ಸತ್ಯಧರ್ಮಪರಾಕ್ರಮಃ – ಸತ್ಯವನ್ನು ಅನುಸರಿಸುವವನು, ಜಗತಃ ಸೇತುಃ – ಸುಖ ದುಃಖಗಳಿಗೆ ಕಾರಣವಾಗುವ ಪಾಪ ಪುಣ್ಯಗಳ ಸೇತುವೆ, ಆದ್ದರಿಂದ ಔಷಧಂ – ಔಷಧದಂತೆ ಎಲ್ಲರಿಗೂ ಯೋಗಕ್ಷೇಮವನ್ನು ತರುವವ.
೫. ಕ್ರೋಧಃ ಕ್ರೋಧಕೃತ್ ಕರ್ತಾ ವಿಶ್ವಬಾಹುರ್ಮಹೀಧರಃ (34)
ಒಳ್ಳೆಯವರ ಕೋಪವನ್ನು ನಾಶಮಾಡುವವನು (ಅಥವಾ ಒಳ್ಳೆಯವರನ್ನು ನೋಡಿ ಕೋಪ ಕಳೆದುಕೊಳ್ಳುವವನು), ಕೆಟ್ಟ ಜನರ ಮೇಲೆ ಕೋಪಗೊಳ್ಳುವವನು, ಒಳ್ಳೆಯ ಆಡಳಿತಗಾರ/ರಾಜ.
೬.ಈಶ್ವರೋ ವಿಕ್ರಮೀ ಧನ್ವೀ ಮೇಧಾವಿ (9)
ಬುದ್ಧಿವಂತ, ಪರಾಕ್ರಮಿ ಮತ್ತು ಆಯುಧಗಳನ್ನು ಬಳಸುವುದರಲ್ಲಿ ನಿಪುಣನಾದವನು ಒಳ್ಳೆಯ ರಾಜ, ಅಥವಾ ಸರ್ವಜ್ಞ, ಸರ್ವಶಕ್ತ ಮತ್ತು ಸರ್ವವ್ಯಾಪಿಯಾದವನು ಎಂದು ಅರ್ಥೈಸಬಹುದು.
೭.ಅಮೂರ್ತಿರನಾಘೋ’ಚಿಂತ್ಯೋ ಭಯಕೃದ್ಭಯನಾಶನಃ (89)
ದೋಷರಹಿತ (ಪಾಪರಹಿತ), ನಿರ್ದಿಷ್ಟ ರೂಪವಿಲ್ಲದೆ (ನಿರ್ದಿಷ್ಟ ಪ್ರಕಾರ ಎಂದು ವರ್ಗೀಕರಿಸಲಾಗದ), ಗ್ರಹಿಸಲಾಗದ, ಕೆಟ್ಟದ್ದರ ಮೇಲೆ ಭಯ ಹುಟ್ಟಿಸುವ ಮತ್ತು ಒಳ್ಳೆಯದರಲ್ಲಿ ಭಯವನ್ನು ನಾಶಮಾಡುವವನು.
೮.ಕಾಮಕೃತ್ಕಾಂತಃ ಕಾಮಃ ಕಾಮಪ್ರದಃ ಪ್ರಭುಃ (32) – ನಿಷಿದ್ಧ ಕಾಮಗಳನ್ನು ನಾಶಮಾಡುವವನು, ವಿಹಿತ ಕಾಮನೆಗಳನ್ನು ಕೊಡುವವನು, ಆಕರ್ಷಕನಾದವನು, ಬಯಸಿದ್ದನ್ನು ನೀಡುವ ರಾಜ.
ಈ ಹೇಳಿಕೆಯಿಂದ ನಂತರ, ಶ್ರೀ ಅನಂತಕೃಷ್ಣ ಶಾಸ್ತ್ರಿಯವರು ಸಾರಾಂಶವಾಗಿ ಇವು ಕೆಲವು ಸಿದ್ಧಾಂತಗಳು ಅಥವಾ ನೀತಿಗಳು ಎಂದು ಹೇಳಿ, ಇತರವುಗಳನ್ನು ಈ ರೀತಿಯಲ್ಲಿ ಯೋಚಿಸಿ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಸಮಾರೋಪ ಮಾಡುತ್ತಾರೆ.
ಭಗವಾನ್ ಭಾಷ್ಯಕಾರಾದ ಶಂಕರರು ಈ ಸಹಸ್ರನಾಮಕ್ಕೆ ಭಾಷ್ಯ ಬರೆಯಲು ಏಕೆ ನಿರ್ಧರಿಸಿದರು ? ಅದಕ್ಕೊಂದು ಕಥೆಯನ್ನು ಹೇಳುತ್ತಾರೆ, ಶಂಕರಾಚಾರ್ಯರು ತೈತ್ತರೀಯಕ್ಕೆ ಭಾಷ್ಯ ಬರೆಯಲು ನಿರ್ಧರಿಸಿ ಪುಸ್ತಕ ತೆಗದಾಗ ಈ ಗ್ರಂಥವೇ ಮತ್ತೆ ಮತ್ತೆ ದೊರಕಲು ಇದು ಈಶ್ವರನ ಇಚ್ಛೆ ಎಂದುಕೊಂಡು, ಅವರು ಈ ಭಾಷ್ಯ ಬರೆಯಲು ನಿರ್ಧರಿಸಿದರು. ಆದರೆ ಇದು ಸತ್ಯವಲ್ಲ, ಯಾಕೆಂದರೆ ಶಂಕರರು ಅವರು ಐದು ವರ್ಷ ವಯಸ್ಸಿನಲ್ಲಿ ನಾಲ್ಕುವೇದಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ತೈತ್ತರೀಯಕ್ಕೆ ಭಾಷ್ಯ ಬರೆಯಲು ಪುಸ್ತಕ ಹುಡುಕುವ ಅವಶ್ಯಕತೆ ಅವರಿಗೆ ಇರಲಿಲ್ಲ , ಮತ್ತು ವಿಷ್ಣುಸಹಸ್ರನಾಮ ಅವರಿಗೆ ಕಂಠಸ್ತ ಮಾಡಲು ಕಷ್ಟವೇನೂ ಇಲ್ಲ. ಇದಲ್ಲದೆ, ನಾಲ್ಕುವೇದಗಳನ್ನು ಕಂಠಪಾಠ ಮಾಡಿ ಅಭ್ಯಾಸವಿರುವವರಿಗೆ ಯಾವುದನ್ನಾದರೂ ಕಂಠಪಾಠ ಮಾಡುವುದು ಸುಲಭವೇ ಆಗಿರುತ್ತದೆ.
ಇದು ಮಹಾಭಾರತದಿಂದ ತೆಗೆದುಕೊಳ್ಳಲಾದ ಗ್ರಂಥ. ಮಹಾಭಾರತದ ಬಗ್ಗೆ ಹೀಗೆ ಹೇಳಲಾಗಿದೆ: “ಯದಿಹ ಅಸ್ತಿ ತದನ್ಯತ್ರ ಯನ್ನೈವ ಅಸ್ತಿ ನ ತತ್ಕ್ವಚಿತ್” – ಇಲ್ಲಿ ಇರುವ ವಿಷಯ ಬೇರೆಯಡೆ ಕೂಡ ಇರುತ್ತದೆ, ಆದರೆ ಇಲ್ಲಿ ಇಲ್ಲದಿರುವುದು ಎಲ್ಲೆಡೆಲೂ ಇರುವುದಿಲ್ಲ. “ಮಹಾಭಾರತ ಪಂಚಮಂ ವೇದಃ” — ಮಹಾಭಾರತವೇ ಐದನೆಯ ವೇದ. ವೇದಗಳನ್ನು ಅಪೌರುಷೇಯ ಗ್ರಂಥಗಳೆಂದು, ಅವು ಸನಾತನವಾದವು ಅಥವಾ ಸೃಷ್ಟಿಕರ್ತನಿಂದ ಸ್ವಾಭಾವಿಕವಾಗಿ ಬಂದವು ಎಂದು ಅಂಗೀಕರಿಸಲಾಗಿದೆ. ಆದರೆ ಈ ಮಹಾಭಾರತದ ಗ್ರಂಥಕ್ಕೆ ಶ್ರೀವ್ಯಾಸರು ಕರ್ತೃ ಎಂದು ತಿಳಿದಿದ್ದರೂ ಕೂಡ, ಮಹಾಭಾರತದ ಮಹಿಮೆ ಮತ್ತು ಮಹತ್ವದಿಂದ ಅದು ವೇದಕ್ಕೆ ಸಮಾನವಾಗಿ ಪೂಜಿಸಲ್ಪಡುತ್ತದೆ.
ಶ್ರೀ ವ್ಯಾಸರ ಬಗ್ಗೆ ಒಂದು ಪ್ರಸಿದ್ಧ ಹೇಳಿಕೆ ಇದೆ: “ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಂ | ಕೋ’ಹನ್ಯೋ ಮಹಾಭಾರತಕೃತ್ ಭವೇತ್ ||” — ಇದರ ಅರ್ಥ “ಕೃಷ್ಣದ್ವೈಪಾಯನ ವ್ಯಾಸರು ಭಗವಾನ್ ವಿಷ್ಣುವೇ ಹೊರತು ಬೇರೆ ಯಾರೂ ಅಲ್ಲ, ಏಕೆಂದರೆ ಮಹಾಭಾರತವನ್ನು ಬೇರೆ ಯಾರು ರಚಿಸಲು ಸಾಧ್ಯ?”
“ವ್ಯಾಸ” ಎಂಬ ಪದದ ಬಗ್ಗೆ ಸಾಮಾನ್ಯ ತಪ್ಪು ತಿಳುವಳಿಕೆ ಇದೆ. ವಿದ್ವಾಂಸರು ಇದನ್ನು “ಆಸನ” ಅಥವಾ “ಸ್ಥಾನ” ಎಂದು ಅರ್ಥೈಸುತ್ತಾರೆ. ಆಧ್ಯಾತ್ಮಿಕ ಸಂದರ್ಭಗಳಲ್ಲಿ, ಪ್ರವಚನ ನೀಡುವ ವ್ಯಕ್ತಿಯನ್ನು ವ್ಯಾಸ ಎಂದು ಕರೆಯಲಾಗುತ್ತದೆ ಮತ್ತು ಅವರು ಕುಳಿತುಕೊಳ್ಳುವ ಆಸನವನ್ನು ವ್ಯಾಸಗದ್ಧಿ ಅಥವಾ “ವ್ಯಾಸರ ಆಸನ” ಎಂದು ಕರೆಯಲಾಗುತ್ತದೆ. ಪರಿಣಾಮವಾಗಿ, ವಿಭಿನ್ನ ವ್ಯಾಸರು ವಿವಿಧ ಪುರಾಣಗಳನ್ನು ಬರೆದಿದ್ದಾರೆ ಎಂದು ಕೆಲವರು ನಂಬುತ್ತಾರೆ. ಆದಾಗ್ಯೂ, ನಾವು ಈ ದೃಷ್ಟಿಕೋನವನ್ನು ಸ್ವೀಕರಿಸುವುದಿಲ್ಲ. ಬದಲಾಗಿ, ವ್ಯಾಸ, ವೇದವ್ಯಾಸ, ಬಾದರಾಯಣ ಮತ್ತು ಇತರ ಹೆಸರುಗಳನ್ನು ಸಮಾನಾರ್ಥಕ ಪದಗಳೆಂದು ಪರಿಗಣಿಸುತ್ತೇವೆ, ಅಂದರೆ ವ್ಯಾಸರು ಒಬ್ಬರೇ ಎಂದರ್ಥ. ಆದ್ದರಿಂದ, ನಮ್ಮ ದೃಷ್ಟಿಕೋನದಿಂದ, ಎಲ್ಲಾ ಪುರಾಣಗಳನ್ನುಒಬ್ಬರೇ ವ್ಯಾಸರ ರಚಿಸಿದ್ದಾರೆ.
ವ್ಯಾಸರ ಬಗ್ಗೆ ಇನ್ನೊಂದು ಹೇಳಿಕೆ ಇದೆ: “ವ್ಯಾಸ ಉಚ್ಚಿಷ್ಟಂ ಜಗತ್ ಸರ್ವಂ,” ಅಂದರೆ “ಜಗತ್ತಿನಲ್ಲಿ ಎಲ್ಲವೂ ವ್ಯಾಸರ ಅವಶೇಷ.” “ಉಚ್ಚಿಷ್ಟ” ಎಂಬ ಪದದ ಅಕ್ಷರಶಃ ಅರ್ಥ “ಏಂಜಲು” ಎಂದು. ಆದರೆ ಇಲ್ಲಿಯ ಅರ್ಥ, ಪ್ರಪಂಚದಲ್ಲಿರುವ ಎಲ್ಲಾ ವಿಚಾರಗಳು ಈಗಾಗಲೇ ವ್ಯಾಸರಿಂದ ಉಚ್ಚರಿಸಲ್ಪಟಿದೆ.