ಸಾಂಖ್ಯ ದರ್ಶನವು ಅದ್ವೈತ ದರ್ಶನಕ್ಕೆ ಬಹಳ ಹತ್ತಿರವಾದ ದರ್ಶನ. “ದೃಶ್ಯತೆ ಅನೇನ ಇತಿ” ಅಂದರೆ ಯಾವುದರ ಮೂಲಕ ಸತ್ಯವನ್ನು ನೋಡುತ್ತೇವೋ ಅದುವೇ ದರ್ಶನ (Philosophy).
ಕಪಿಲ ಮಹರ್ಷಿ ಈ ದರ್ಶನದ ದಾರ್ಶನಿಕ. ನಮ್ಮ ಪರಂಪರೆಯಲ್ಲಿ ಬಂದಿರುವ ಆರು ಆಸ್ತಿಕ ದರ್ಶನಗಳಲ್ಲಿ ಇದು ಮೊದಲನೆಯ ದರ್ಶನವಾಗಿದೆ. ಸಾಮಾನ್ಯವಾಗಿ ಆಸ್ತಿಕ ಎಂಬ ಪದವನ್ನು ದೇವರಲ್ಲಿ ನಂಬಿಕೆ ಎಂದು ಅರ್ಥೈಸುತ್ತಾರೆ. ಆದರೆ ಇಲ್ಲಿ ಅದನ್ನು ಯಾರು ವೇದಗಳನ್ನು ಪ್ರಮಾಣವಾಗಿ ಸ್ವೀಕರಿಸುತ್ತಾರೋ ಅವರನ್ನು “ಆಸ್ತಿಕ” ಎಂದು ಕರೆಯಲಾಗಿದೆ.
ಕಪಿಲ ಮಹರ್ಷಿಯು ಸಾಂಖ್ಯ ದರ್ಶನವನ್ನು ೫೦೦ಕ್ಕೂ ಹೆಚ್ಚು ಸೂತ್ರಗಳನ್ನಾಗಿ ಬರೆದಿದ್ದಾರೆ. ಈ ಗ್ರಂಥವು ಈಶ್ವರ ಕೃಷ್ಣರಿಂದ ಬರೆಯಲ್ಪಟ್ಟ ಸಾಂಖ್ಯ ಕಾರಿಕವನ್ನು ವಿವರಿಸುತ್ತದೆ. ಈ ಕಾರಿಕೆಯ ಮೇಲೆ ಗೌಡಪಾದರು ಭಾಷ್ಯವನ್ನು ಬರೆದಿರುತ್ತಾರೆ.