8. ಸೌಕ್ಷ್ಮ್ಯಾತದನುಪಲಬ್ಧಿ: ನಾಭಾವಾತ್ ಕಾರ್ಯತತ್ಸದುಪಲಬ್ಧೆ: ।
ಮಹದಾದಿ ತಚ್ಚ ಕಾರ್ಯ ಪ್ರಕೃತಿ ವಿರೂಪಂ ಸರೂಪಂ ಚ ।।
ಪ್ರಧಾನವು ಸೂಕ್ಷ್ಮವಾಗಿರುವುದರಿಂದ ಉಪಲಬ್ಧಿಯಾಗುವುದಿಲ್ಲ , ಹೇಗೆಂದರೆ ಆಕಾಶದಲ್ಲಿ ಧೂಮ, ಉಷ್ಣದ ಪರಮಾಣು ಇದ್ದರೂ ಅದು ಹೇಗೆ ಕಾಣುವುದಿಲ್ಲವೋ ಹಾಗೆ. ಹಾಗಾಗಿ ನಾವು ಕಾರ್ಯ ಲಿಂಗಕ ಅನುಮಾನವನ್ನು ಉಪಯೋಗಿಸಬೇಕಾಗಿದೆ. ಅಂದರೆ ಕಾರ್ಯವನ್ನು ನೋಡಿ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಬೇಕು.
ಬುದ್ಧಿ, ಅಹಂಕಾರ, ಪಂಚ ತನ್ಮಾತ್ರೆ, ಪಂಚ ಮಹಾಭೂತಗಳು, ಏಕಾದಶ ಇಂದ್ರಿಯಗಳು ಇವು ಪ್ರಧಾನದ ಕಾರ್ಯಗಳು. ಈ ಕಾರ್ಯಗಳು ಪ್ರಕೃತಿಯ ವಿರೂಪವಾಗಿಯೂ ಸರೂಪವಾಗಿಯೂ ಇವೆ. ಉದಾ : ಪ್ರಪಂಚದಲ್ಲಿ ನೋಡಿದ ಹಾಗೆ ಮಗನು ತಂದೆಯಂತೆಯೂ ಇರಬಹುದು, ತಂದೆಯ ವಿರೂಪವಾಗಿಯೂ ಇರಬಹುದು.
ಹಾಗಾದರೆ ಈ ವಿರೂಪಕ್ಕೂ ಸರೂಪಕ್ಕೂ ಕಾರಣವೇನು? ಕಾರಣವು ಸತ್ ಆಗಿರುವುದೋ ಅಥವಾ ಅಸತ್ ಆಗಿರುವುದೋ ?
9. ಅಸದ್-ಅಕರಣಾದ್ ಉಪಾದಾನ ಗ್ರಹಣಾತ್ ಸರ್ವ ಸಂಭವಾಭಾವಾತ್ ।
ಶಕ್ತಸ್ಯ ಶಕ್ಯ ಕಾರಣಾತ್ ಕಾರಣ-ಭಾವಾಚ್ಚ ಸತ್ಕಾರ್ಯಮ್ ।।
ಅಸತ್ (ನ ಸತ್ ಇತಿ ಅಸತ್ ) ಕಾರಣವಲ್ಲದರಿಂದ ಸತ್ಕಾರ್ಯವು ಸಿದ್ದವಾಗುತ್ತದೆ. ಈ ಲೋಕದಲ್ಲಿ ಅಸತ್ ಕಾರಣವಾಗಿರುವುದಿಲ್ಲ, ಮರಳಿನಿಂದ (ರೇತಿ) ಎಣ್ಣೆಯ ಉತ್ಪತ್ತಿಯಾಗುವುದಿಲ್ಲ. ಕಾರ್ಯದಲ್ಲಿ ಕಾರಣದ ಸಮಾನತೆಯು, ಸಾದೃಶ್ಯತೇ , ಅಸ್ತಿತ್ವತೆ ಇರಬೇಕಾಗುತ್ತದೆ. ಆದ್ದರಿಂದ ಪ್ರಧಾನವು ಸತ್ ಆಗಿದೆ.
ಉಪಾದಾನ ಗ್ರಹಣಾತ್
ಲೋಕದಲ್ಲಿ ನೋಡಿರುವಂತೆ ಯಾವುದ್ದನ್ನು ಇಚ್ಛೆಸುತ್ತೇವೆಯೋ ಅದರ ಉಪಾದಾನವನ್ನೇ ಗ್ರಹಿಸುತ್ತೇವೆ. ಉದಾ : ಮೊಸರು ಬೇಕಾಗಿದ್ದರೆ ಹಾಲನ್ನು ಗ್ರಹಿಸುತ್ತೇವೆ ಹೊರತು ನೀರನಲ್ಲ.
ಸರ್ವ ಸಂಭವ – ಅಭಾವಾತ್ : ಎಲ್ಲವೂ ಎಲ್ಲಾ ಕಡೆಯಿರುವುದಿಲ್ಲ. ಹೇಗೆ ಸುವರ್ಣವು ಬೆಳ್ಳಿಯಿಂದ ಉತ್ಪತ್ತಿಯಾಗುವುದಿಲ್ಲ.
ಶಕ್ತಸ್ಯ- ಶಕ್ತ ಕಾರಣಾತ್
ಯಾರಿಗೆ ಯಾವ ಶಕ್ತಿಯಿರುವುದೋ ಅದು ಕಾರ್ಯವಾಗುವುದು. ಉದಾ : ಕುಂಬಾರನಿಂದ ಮಡಿಕೆ ಮಾಡಲಾಗುವುದೋ ಹೊರತು ಬೇರೆಯೇನು ಆಗುವುದಿಲ್ಲ.
ಕಾರಣ-ಭಾವಾಚ್ಚ
ಕಾರಣ ಸತ್ ಆಗಿರುವುದರಿಂದ ಕಾರ್ಯವು ಸತ್ ಆಗಿರುತ್ತದೆ. ಉದಾ : ಏನನ್ನು ಬಿತ್ತುತ್ತೇವೆ ಅದೇ ಬೆಳೆಯುತ್ತದೆ. ಇದರಿಂದ ಕಾರ್ಯವೂ ಸತ್ ಆಗಿರುತ್ತದೆ ಹಾಗೂ ಅದರ ಕಾರಣವಾದ ಪ್ರಧಾನವೂ ಕೂಡ ಸತ್ ಆಗಿರುತ್ತದೆ.
ಪ್ರಕೃತಿಯೂ ವಿರೂಪ ಹಾಗು ಸರೂಪವಾಗಿರುವುದು ಹೇಗೆ ?
10. ಹೇತುಮತ್ ಅನಿತ್ಯ೦ ಅವ್ಯಾಪಿ ಸಕ್ರಿಯ೦ ಅನೇಕ೦ ಆಶ್ರಿತ೦ ಲಿಂಗಮ್ ।
ಸಾವಯವ೦ ಪರತಂತ್ರ೦ ವ್ಯಕ್ತ೦ ವಿಪರೀತ೦ ಅವ್ಯಕ್ತ೦ ।।
ವ್ಯಕ್ತವೇನಿದೆ (ಮಹದಾದಿ ) ಅದು ಹೇತುಮಾನ್ ಅಂದರೆ ಯಾವುದಕ್ಕೆ ಕಾರಣವಿರುವುದೋ ಅದು. ಅನಿತ್ಯವು , ಅವ್ಯಾಪಿಯು , ಸಕ್ರಿಯವು, ಅನೇಕವು, ಆಶ್ರಿತವು, ಲಿಂಗವೂ (ಅಂದರೆ ‘ಲೀನಂ ಗಮಯತಿ ಲಿಂಗಂ’, ಯಾವುದು ನಾಶ ಹೊಂದುವುದೋ ಅದು ಲಿಂಗವು ), ಸಾವಯವ ಉಳ್ಳದು, ಪರತಂತ್ರವು ಆಗಿರುತ್ತದೆ.
ಅವ್ಯಕ್ತವಾದ ಪ್ರಧಾನವು ಇದಕ್ಕೆ ವಿಪರೀತವಾಗಿರುತ್ತದೆ. ಅಂದರೆ ಪ್ರಧಾನವು ಕಾರಣ ರಹಿತವಾಗಿಯೂ, ನಿತ್ಯವು, ವ್ಯಾಪಿಯು , ಸಕ್ರಿಯವಲ್ಲದ್ದು, ಅಲಿಂಗಿಯು, ಸಾವಯವವಿಲ್ಲದ್ದು, ಸ್ವತಂತ್ರವೂ ಆಗಿರುತ್ತದೆ.