26. ಬುದ್ಧಿ: ಇಂದ್ರಿಯಾಣಿ ಚಕ್ಷು: ಶ್ರೋತ್ರ ಘ್ರಾಣ ರಸನ ತ್ವಗ್ ಆಖ್ಯಾನಿ ।
ವಾಕ್ – ಪಾಣಿ-ಪಾದ-ಪಾಯಾ ಉಪಸ್ಥಾನ ಕರ್ಮೇಂದ್ರಿಯಾಣಯಾಹು ।।
ಚಕ್ಷು,ಶ್ರೋತ್ರ,ಘ್ರಾಣ,ರಸನ,ತ್ವಕ್ ಇವನ್ನು ಬುದ್ಧಿ ಇಂದ್ರಿಯವೆನ್ನುತ್ತಾರೆ. ಶಬ್ದ,ಸ್ಪರ್ಶ ಇತ್ಯಾದಿ ಐದು ವಿಷಯಗಳು ಯಾವುದು ಅರಿವಿಗೆ ಬರುತ್ತದೆಯೋ ಅದನ್ನು ಬುದ್ಧಿ-ಇಂದ್ರಿಯಗಳು ಎನ್ನುವರು.
ಯಾವುದರ ಮೂಲಕ ಕರ್ಮವನ್ನು ಮಾಡುತ್ತೇವೆಯೋ ಅದನ್ನು ಕರ್ಮೇಂದ್ರಿಯಾ ವೆನ್ನುತ್ತಾರೆ. ಬಾಯಿಂದ ಮಾತಾಡುತ್ತೇವೆ. ಹಸ್ತದಿಂದ ನಾನಾ ಕರ್ಮವನ್ನು ಮಾಡುತ್ತೇವೆ. ಪಾದದಿಂದ ಗಮನ-ಆಗಮನ, ಪಾಯುವಿಂದ ಉತ್ಸರ್ಗ, ಉಪಸ್ಥದಿಂದ ಆನಂದ ಪ್ರಜಾ ಉತ್ಪತ್ತಿಯಾಗುತ್ತದೆ.ಇದರಿಂದ ಅದನ್ನು ಕರ್ಮೇಂದ್ರಿಯವೆನ್ನುತ್ತೇವೆ.
ಇಲ್ಲಿ 10 ಇಂದ್ರಿಯಗಳ ವಿವರಣೆ ಕೊಟ್ಟದ್ದು ಆಯಿತು. ಏಕಾದಶ ಇಂದ್ರಿಯವಾದ ಮನಸ್ಸಿನ ಲಕ್ಷಣವೇನು ?
27. ಉಭಯಾತ್ಮಕಮತ್ರ ಮನ: ಸಂಕಲ್ಪಕಮ್ ಇಂದ್ರಿಯಮ್ ಚ ಸಾಧರ್ಮ್ಯಾತ್ ।
ಗುಣಪರಿಣಾಮ ವಿಶೇಷಾತ್ ನಾನಾತ್ವಂ ಬಾಹ್ಯಭೇದಶ್ಚ ।।
ಇಂದ್ರಿಯ ವರ್ಗದಲ್ಲಿ ಮನವು ಉಭಯಾತ್ಮಕವು. ಮನವು ಬುದ್ಧಿ-ಇಂದ್ರಿಯದ ಜೊತೆ ಪ್ರವೃತ್ತಿ ಹೊಂದಿದಾಗ ಬುದ್ಧಿ-ಇಂದ್ರಿಯವಾಗುತ್ತಾದೆ. ಕರ್ಮೇಂದ್ರಿಯದ ಜೊತೆ ಪ್ರವೃತ್ತಿ ಹೊಂದಿದಾಗ ಕರ್ಮೇಂದ್ರಿಯವಾಗುತ್ತದೆ. ಮನವು ಸಂಕಲ್ಪ ಮಾಡುವುದರಿಂದ ಅದನ್ನು ‘ಸಂಕಲ್ಪಕಮ್’ ಎಂದು ಹೇಳಲಾಗಿದೆ.ಅಂದರೆ ಮನವು ಅಂತ: ಕರಣದಲ್ಲಿ ಸಂಕಲ್ಪವು. ಬಹಿ: ಕರಣದಲ್ಲಿ ಇಂದ್ರಿಯವು ಆಗಿರುತ್ತದೆ. ಮನದ ಸಂಬಂಧವಿಲ್ಲದೆ ಇಂದ್ರಿಯಗಳ ಪ್ರವೃತ್ತಿ ಆಗುವುದೇ ಇಲ್ಲ.
ಸಾತ್ವಿಕ ಅಹಂಕಾರ ‘ವೈಕೃತ’ದಿಂದ ಬುದ್ಧಿ-ಇಂದ್ರಿಯ ಮತ್ತು ಕರ್ಮೇಂದ್ರಿಯ ಸೃಷ್ಟಿಯಾದಂತೆ,ಮನವು ಕೂಡ ವೈಕೃತದಿಂದಲೇ ಆಗಿರುವುದರಿಂದ ಇಲ್ಲಿ ಸಮಾನಧರ್ಮವನ್ನು ಕಾಣಬಹುದು.
ಈ ಸಮಾನಧರ್ಮದಿಂದಲೇ ಮನಸ್ಸು ಇಂದ್ರಿಯವಾಗುತ್ತದೆ.ಹೀಗೆ ವೈಕೃತದಿಂದ ಏಕಾದಶ ಇಂದ್ರಿಯ ಸೃಷ್ಟಿಯಾಗುತ್ತದೆ.
ಹಾಗಾದರೆ ಮನಸ್ಸಿನ ಕೆಲಸವೇನು ? ಸಂಕಲ್ಪವೇ ಅದರ ವೃತ್ತಿ. ಬುದ್ಧಿ-ಇಂದ್ರಿಯದಲ್ಲಿ ಶಬ್ದ ಇತ್ಯಾದಿ,ಕರ್ಮೇಂದ್ರಿಯದಲ್ಲಿ ವಚನ ಇತ್ಯಾದಿ ಮನಸ್ಸಿನ ವೃತ್ತಿ ಆಗಿರುತ್ತದೆ.
ಸರಿ,ಬೇರೆ ಬೇರೆ ಇಂದ್ರಿಯಗಳಿವೆ,ಅದರ ವಿಷಯವು ಬೇರೆ ಬೇರೆ ಆಗಿದೆ.ಒಂದೇ ಪ್ರಧಾನದಿಂದ ಸೃಷ್ಟಿಯಾಗಿದ್ದರೂ ಅದರ ಪ್ರವೃತ್ತಿ ಬೇರೆ ಬೇರೆಯೇ ಆಗಿವೆ.ಹಾಗಾದರೆ ಇಂದ್ರಿಯವನ್ನು ಪ್ರವೃತ್ತಿ ಮಾಡಿಸುವುದು ಯಾರು ? ಈಶ್ವರನೋ ಅಥವಾ ಸ್ವಭಾವವೋ ?
ಸ್ವಭಾವವೇ ಕಾರಣವು.ಹೇಗೆಂದರೆ ಪ್ರಧಾನ , ಬುದ್ಧಿ,ಅಹಂಕಾರ ಇವೆಲ್ಲವೂ ಅಚೇತನವು. ಪುರುಷನು ಅರ್ಕತನು.ಆದ್ದರಿಂದ ಬುದ್ಧಿ,ಅಹಂಕಾರವಾಗಲಿ,ಪುರುಷನಾಗಲಿ ಇಂದ್ರಿಯವನ್ನು ಪ್ರವೃತ್ತಿ ಮಾಡಿಸುವುದಕ್ಕೆ ಸಾಧ್ಯವಿಲ್ಲ.ಆದ್ದರಿಂದ ಸ್ವಭಾವವೇ ಕಾರಣವು.
ಏಕಾದಶ ಇಂದ್ರಿಯವು ಶಬ್ದ ,ಸ್ಪರ್ಶ,ರೂಪ,ರಸ,ಗಂಧದಲ್ಲಿ*,ವಚನ,ಆದಾನ,ವಿಹರಣ, ಉತ್ಸರ್ಗ ಮತ್ತು ಆನಂದದಲ್ಲಿ ಮತ್ತು ಮನಸ್ಸು ಸಂಕಲ್ಪದಲ್ಲಿ ಪ್ರವೃತ್ತಿ ಹೊಂದಿರುತ್ತದೆ.ಹೀಗಾಗಿ ಇಂದ್ರಿಯಗಳ ವಿಷಯವು ಭಿನ್ನವಾಗಿದೆ.ಅದು ಹೇಗೆ ಎಂದರೆ ‘ಗುಣ ಪರಿಣಾಮ ವಿಶೇಷಾತ್’. ಅಂದರೆ ಸತ್ವ,ರಜೋ ಮತ್ತು ತಮೋಗುಣಗಳು ,ಇಂದ್ರಿಯಗಳೊಂದಿಗೆ ಇರುವ ಸಂಬಂಧದ ವ್ಯತ್ಯಾಸದಿಂದ.
ಗುಣ ಪರಿಣಾಮದ ಕಾರಣವು ಸ್ವಭಾವವೇ ಆಗಿದೆ.
ಗುಣವು ಹೇಗೆ ಪ್ರವೃತ್ತಿಗೆ ಕಾರಣವಾಗುತ್ತದೆ ?
ಗುಣವು ಅಚೇತನವು ಅದು ಪ್ರವೃತ್ತಿ ಮಾಡಲಾರದು,ಎಂದರೆ ?ಹಾಗಲ್ಲ,ಹಸುವಿನಲ್ಲಿ ಹಾಲು ಹೇಗೆ ತನ್ನ ಕರುವಿನ ಬೆಳವಣಿಗೆಗಾಗಿ ಉತ್ಪತ್ತಿಯಾಗುವುದೋ ಹಾಗೆಯೇ ಅಜ್ಞಾದಿಂದ(ಪ್ರಧಾನ) ಆಗುವ ಪ್ರವೃತ್ತಿ ಪುರುಷನಿಗೆ ಮೋಕ್ಷ ಕೊಡಿಸುವ ಸಲುವಾಗಿಯೇ ಆಗುತ್ತಾದೆ.
ಗುಣ ಪರಿಣಾಮ ವಿಶೇಷದಿಂದ ಕರ್ಮೇಂದ್ರಿಯಗಳು ಮತ್ತು ಜ್ಞಾನೇಂದ್ರಿಯಗಳು ಸ್ವಸ್ಥಾನದಲ್ಲಿದ್ದು ಕೊಂಡು* ಯಾವ ವಿಷಯದೊಂದಿಗೆ ಸಂಬಂಧ ಉಂಟಾಗುತ್ತದೆಯೋ ಆ ವಿಷಯದ ಅನುಭವವನ್ನು ಮನಸ್ಸಿಗೆ ತರುತ್ತದೆ ತನಗಾಗಿ ಅಲ್ಲ.
ಇಂದ್ರಿಯಗಳ ಕಾರಣವನ್ನು ತೋರಿಸಿದ್ದಾಗಿದೆ.ಹಾಗಾದರೆ ಇದರ ಕಾರ್ಯವೇನು ?
28. ಶಬ್ದಾದಿಷು ಪಂಚಾನಾಮಾ ಲೋಚನ ಮಾತ್ರಂ ಈಷ್ಯತೆ ವೃತ್ತಿ: ।
ವಚನಾದಾನವಿಹಾರಣೋತ್ಸರ್ಗಾನಂದಶ್ಚ ಪಂಚಾನಾಮ್ ।।
ಮಾತ್ರ ಶಬ್ದವು ಇಲ್ಲ ವಿಶೇಷಾರ್ಥವಾಗಿ ಮತ್ತು ಅವಿಶೇಷಾ ನಿವೃತ್ತಿಗಾಗಿ ಉಪಯೋಗಿಸಲಾಗಿದೆ.ಹೇಗೆಂದರೆ ಕಣ್ಣು ರೂಪವನ್ನು ಮಾತ್ರ ಗ್ರಹಿಸುತ್ತದೆ ಶಬ್ದ,ರಸ,ಇತ್ಯಾದಿಯನ್ನು ಗ್ರಹಿಸುವುದಿಲ್ಲ.ಹೀಗೆ ಕಿವಿಯು ಶಬ್ದವನ್ನು , ನಾಲಿಗೆ ರಸವನ್ನು, ಮೂಗು ವಾಸನೆಯನ್ನು ಮತ್ತು ಚರ್ಮ ಸ್ಪರ್ಶವನ್ನು ಮಾತ್ರ ಗ್ರಹಿಸುತ್ತದೆ. ಇವು ಬುದ್ಧಿ-ಇಂದ್ರಿಯಗಳ ವೃತ್ತಿಯಾಗಿವೆ.
ಹಾಗದರೆ ಕರ್ಮೇಂದ್ರಿಯ ವೃತ್ತಿಯೇನು ?
ವಾಕ್ ವಚನವು, ಹಸ್ತದಿಂದ ಆದಾನ, ಪಾದವು ವಿಹರಣ, ಪಾಯು ಮಲ ವಿಸರ್ಜನೆಗೆ, ಉಪಸ್ಥವು ಆನಂದಕ್ಕಾಗಿ ಮತ್ತು ಪುತ್ರ ಉತ್ಪತ್ತಿಗಾಗಿ ಮಾತ್ರವೇ ಇವೆ.
29. ಸ್ವಾಲಕ್ಷಣ್ಯ೦ ವೃತ್ತಿತ್ರ್ಸಯಸ್ಯ ಸೈಷಾ ಭವತ್ಯ ಅಸಾಮಾನ್ಯ ।
ಸಾಮಾನ್ಯಕರಣವೃತ್ತಿ: ಪ್ರಾಣಾಧ್ಯ ವಾಯುವ: ಪಂಚ ।।
ಸ್ವಲಕ್ಷಣವೇ ಸ್ವಾ ಲಕ್ಷಣ್ಯ ಅಂದರೆ ಬುದ್ಧಿಯ ಲಕ್ಷಣ ‘ಅಧ್ಯಾವಸಾಯೋ ಬುದ್ಧಿ:*’ ಎಂಬಂತೆ, ‘ಅಭಿಮಾನ ಅಹಂಕಾರ:’ ಅಹಂಕಾರದ ವೃತ್ತಿ. ‘ಸಂಕಲ್ಪ೦ ಮನಃ ‘ ಮನಸ್ಸಿನ ವೃತ್ತಿ. ಮೇಲೆ ಹೇಳಿದ ಮೂರು ವೃತ್ತಿಗಳು ಅಸಾಮಾನ್ಯವಾಗಿದೆ. ಹಾಗಾದರೆ ಸಾಮಾನ್ಯ ವೃತ್ತಿ ಎಂದರೇನು ?
ಪಂಚ ಪ್ರಾಣದೊಂದಿಗೆಯಿರುವ ಸಂಬಂಧದಿಂದ ಉಂಟಾದ ವೃತ್ತಿ ಸಾಮಾನ್ಯ ವೃತ್ತಿ.
ಇಂದ್ರಿಯಗಳು ಪಂಚಪ್ರಾಣದ ಸಂಬಂಧದಿಂದಲೇ ಕರ್ಮ ಮಾಡಲು ಸಾಧ್ಯವಾಗುತ್ತದೆ. ಇದರಿಂದಲೇ ವೇದದ ಕೆಲವು ಭಾಗಗಳಲ್ಲಿ ಇಂದ್ರಿಯವನ್ನು ಪ್ರಾಣವೆಂದೇ ಹೇಳಲಾಗಿದೆ.
‘ಪ್ರಾಣ’ ಎಂಬ ಹೆಸರಿನ ವಾಯು ಮೂಗಿನ ಮೂಲಕ ಒಳಗೆ ಹೊರಗೆ ಬರುತ್ತದೆ(ಶ್ವಾಸ-ನಿಶ್ವಾಸ). ಇದರಿಂದಲೇ ಇಂದ್ರಿಯಗಳು ಪುಷ್ಟಿಗೊಳ್ಳುತ್ತವೆ. ಪ್ರಾಣವಿಲ್ಲದೆ ಹೋದರೆ(ಉದಾ:ಮರಣ) ಇಂದ್ರಿಯಗಳು ನಿಷ್ಕ್ರಿಯವಾಗುತ್ತವೆ. ಆದ್ದರಿಂದ ಪ್ರಾಣದ ಸಂಬಂಧ ಎಲ್ಲದರೊಂದಿಗೆ ಸಾಮಾನ್ಯವಾಗಿದೆ.
‘ಅಪಾನ’ವು ಅಪನಯನವು ಅಂದರೆ ಕೆಳಗೆ ತೆಗೆದುಕೊಂಡು ಹೋಗಿ ಉತ್ಸರ್ಗ ಕ್ರಿಯೆಯನ್ನು ಮಾಡಿಸುವುದು. ಉದಾ:ಮಲವಿಸರ್ಜನೆ.
‘ಸಮಾನ’ವು ತಿಂದು-ಕುಡಿದು ಉಂಟಾದ ಶಕ್ತಿಯನ್ನು ದೇಹದ ಎಲ್ಲಾ ಭಾಗಕ್ಕೂ ಸಮಾನವಾಗಿ ಕೊಂಡೊಯ್ಯುತ್ತದೆ. ಉದಾ:ಜೀರ್ಣಶಕ್ತಿ
‘ಉದಾನ’ವು ನಾಭಿಯಿಂದ ಊರ್ಧ್ವವಾಗಿ ಮಸ್ತಕದವರೆಗೆ ತೆಗೆದುಕೊಂಡು ಹೋಗುವ ಸ್ಪಂದನ ಇತ್ಯಾದಿ ಕೆಲಸ ಮಾಡುವುದು. ಉದಾ:ವಾಂತಿ, ತೇಗು ಇತ್ಯಾದಿ.
‘ವ್ಯಾನ’ವು ಶರೀರದಲ್ಲೆಡೆ ವ್ಯಾಪಕವಾಗಿರುವುದು, ನರಗಳಲ್ಲಿ ಶಕ್ತಿಯನ್ನು ಕೊಂಡೊಯ್ಯುವುದಕ್ಕೆ ಸಹಕರಿಸುತ್ತದೆ.
ಪಂಚ ವಾಯುವು ತ್ರಯೋದಶ ಕರಣಗಳಿಗೂ ಸಾಮಾನ್ಯವಾಗಿದೆ.
30. ಯುಗಪಚ್ಚತುಷ್ಟಯಸ್ಯತು ವೃತ್ತಿ: ಕ್ರಮಶಶ್ಚ ತಸ್ಯ ನಿರ್ದಿಷ್ಟಾ ।
ದೃಷ್ಟೆ ತಥಾಪ್ಯದೃಷ್ಟೆ ತ್ರಯಸ್ಯ ತತ್ಪೂರ್ವಿಕಾ ವೃತ್ತಿ: ।।
ಬುದ್ಧಿ, ಅಹಂಕಾರ ಮತ್ತು ಮನಸ್ಸು ಇವು ಪ್ರತಿಯೊಂದು ಇಂದ್ರಿಯದ ಜೊತೆ ಸಂಬಂಧ ಬೆಳೆಸಿದಾಗ ನಾಲ್ಕು ಆಗುತ್ತದೆ (ಚತುಶ್ವಯ), ಪ್ರತಿಯೊಂದು ವಿಷಯದ ನಿಶ್ಚಯ ಜ್ಞಾನ ಪ್ರಾಪ್ತಿಯಾಗುವಾಗ ಯುಗಪತ್ ವೃತ್ತಿಯಾಗುತ್ತದೆ. ಅಂದರೆ ಏಕಕಾಲದಲ್ಲಿ ಅದರ ವೃತ್ತಿಯಾಗುತ್ತದೆ. ಪ್ರತಿಯೊಂದು ಇಂದ್ರಿಯವು ಇವು ಮೂರರೊಂದಿಗೆ ಬೆರೆತು ತನ್ನ ತನ್ನ ವಿಷಯವನ್ನು ಪಡೆಯುತ್ತದೆ. ಆದರೆ ಬುದ್ಧಿ,ಅಹಂಕಾರ,ಮನಸ್ಸಿನ ವೃತ್ತಿ ಒಂದು ನಿರ್ದಿಷ್ಟ ಕ್ರಮದಲ್ಲಿ ಆಗುತ್ತದೆ.
ಇಂದ್ರಿಯವು ಮನಸ್ಸಿಗೆ ವಿಷಯವನ್ನು ಕೊಡುತ್ತದೆ. ಸಂಕಲ್ಪ ವಿಕಲ್ಪಕಾತ್ಮವಾದ ಮನವು ಅದನ್ನು ಬುದ್ಧಿಯ ಮುಂದಿಡುತ್ತದೆ. ಬುದ್ಧಿಯು ಇದು ಮಡಿಕೆ, ಮರವೆಂದು ನಿಶ್ಚಯ ಮಾಡುತ್ತದೆ ಮತ್ತು ಅಹಂಕಾರವು ತನಗೆ ವಿಷಯದ ಜ್ಞಾನವಿದೆ ಎಂಬ ಜ್ಞಾನವಾಗುತ್ತದೆ.
ಈ ರೀತಿಯಾಗಿ ಬುದ್ಧಿ,ಅಹಂಕಾರ, ಮನಸ್ಸು ಮತ್ತು ಇಂದ್ರಿಯ ಇವುಗಳ ವೃತ್ತಿಯು ಕ್ರಮರೂಪದಲ್ಲಿ ಆಗುತ್ತದೆ.
ದೃಷ್ಟದಲ್ಲಿ ಈ ರೀತಿಯ ಕ್ರಮವನ್ನು ಕಾಣಬಹುದು. ಆದರೆ ಅದೃಷ್ಟದಲ್ಲಿ ಈ ರೀತಿ ಇರುವುದಿಲ್ಲ. ದೃಷ್ಟ ಎಂದರೆ Direct Perception, ಅದೃಷ್ಟ ಎಂದರೆ One which can’t be directly perceived. ಅದೃಷ್ಟದಲ್ಲಿ ಇಂದ್ರಿಯದ ಕೆಲಸವಿರುವುದಿಲ್ಲ. ಆದರೆ ಮನಸ್ಸು, ಬುದ್ಧಿ, ಅಹಂಕಾರವು ವೃತ್ತಿ ಪೂರ್ವಕವಾಗಿರುತ್ತದೆ.