1. ದುಃಖಾತ್ರಯಾಭಿಘಾತಾಜಿಜ್ಞಾಸಾ ತದಪಘಾತಕೇ ಹೇತೌ|
ದೃಷ್ಟೇಸಾಪಾರ್ಥಾಚೆನ್ನೈ ಕಾಂತಾತ್ಯಂತತೋsಭಾವಾತ್ ||
ನಾವು ಮೂರು ರೀತಿಯ ದುಃಖಗಳಿಗೆ ಈಡಾಗಿದ್ದೇವೆ. ಅವುಗಳೆಂದರೆ ಆಧ್ಯಾತ್ಮಿಕ, ಆದಿಭೌತಿಕ ಮತ್ತು ಅಧಿ ದೈವಿಕ.
ನಮ್ಮ ಶರೀರದಲ್ಲಿ ಉಂಟಾಗುವ ಜ್ವರ, ಶೀತ, ತಲೆ ನೋವು ಮುಂತಾದ ರೋಗಗಳು ಮತ್ತು ಬಯಸಿದ್ದು ಸಿಗದಿರುವಾಗ ಮನಸಿನಲ್ಲಿ ಉಂಟಾಗುವ ವ್ಯಥೆ ಇವನ್ನು ಆಧ್ಯಾತ್ಮಿಕ ದುಃಖವೆನ್ನುವರು.
ನಮ್ಮ ಹೊರಗಡೆಯಲ್ಲಿ ಮನುಷ್ಯರು, ಪಶು ಪಕ್ಷಿಗಳು ಕ್ರಿಮಿಕೀಟಗಳು ಮುಂತಾಗಿ ಕಾಣಬರುತಿವೆಯಷ್ಟೆ. ಇವುಗಳಿಂದ ಆಗುವ ದುಃಖಕ್ಕೆ ಆಧಿ ಭೌತಿಕ ದುಃಖವೆಂದು ಹೆಸರು.
ಚಳಿ ,ಗಾಳಿ , ಮಳೆ, ಬಿಸಿಲು, ಸಿಡಿಲು ಮುಂತಾದ ಕಾರಣಗಳಿಂದ ಆಗಬಹುದಾದ ದುಃಖವನ್ನು ಅಧಿ ದೈವಿಕವೆನ್ನುವರು.
ಈ ದುಃಖಗಳಿಗೆ ನಾವು ಉಪಯೋಗಿಸುವ ಪ್ರತೀಕರಗಳಿಂದ ಇವು ಅತ್ಯಂತವಾಗಿ ಹೋಗಿಬಿಡುವುದಿಲ್ಲ. ಆಗೇ ಮಟ್ಟಾಗಿದ್ದು ಮತ್ತೆ ಕಾಣಿಸಿಕೊಳ್ಳುವುದು.
ಹಾಗಾದರೆ ವೇದ ಶಾಸ್ತ್ರಗಳಲ್ಲಿ ಇದಕ್ಕೆ ಪರಿಹಾರ ಉಂಟೋ ಅಂದರೆ ?
2. ದೃಷ್ಟವದಾನುಶ್ರವಿಕ: ಸಹಿ ಅವಿಶುದ್ಧಿ-ಕ್ಷಯಾ-ಅತಿಶಯ ಯುಕ್ತ: |
ತದ್ವಿಪರೀತಃ ಶ್ರೇಯಾನ್ ವ್ಯಕ್ತ-ಅವ್ಯಕ್ತ-ಜ್ಞಾ ವಿಜ್ಞಾನಾತ್ ||
ವೇದ ಕರ್ಮಗಳಿಂದಲೂ ದುಃಖ ನಿವಾರಣೆ ಆಗುವುದಿಲ್ಲ. ಈ ಕಾರಿಕೆಯ ಮೂಲಕ ವೇದಗಳ ಖಂಡನೆಯನ್ನು ಮಾಡುತ್ತಿಲ್ಲ. ಬರಿಯ ಕರ್ಮಕಾಂಡದ ಖಂಡನೆಯನ್ನು ಮಾಡಿರುತ್ತಾರೆ.
ವೇದ ಕರ್ಮಗಳಲ್ಲಿ ಮೂರು ತರಹದ ದೋಷಗಳು ಕಂಡು ಬರುತ್ತವೆ. ಅವುಗಳೆಂದರೆ ಅವಿಶುದ್ಧಿ, ಕ್ಷಯಾ ಮತ್ತು ಅತಿಶಯ.
ಅವಿಶುದ್ಧಿ – ವೇದಗಳಲ್ಲಿ ಹೇಳಲ್ಪಟ್ಟಂತೆ ಯಾರಿಗಾದರೂ ಸ್ವರ್ಗದ ಆಸೆಯಿದ್ದರೆ ಜ್ಯೋತಿಷ್ಟೋಮ ಯಾಗ ಮಾಡಬೇಕು. ಅದರಲ್ಲಿ ಗೋವನ್ನು ಬಲಿ ಕೊಡಬೇಕೆಂದು ಹೇಳಿದೆ. ಅದೇ ವೇದದಲ್ಲಿ ” ನ ಹಿಂಸಾತ್ ಸರ್ವ ಭೂತಾನಿ” ಎಂದು ಕೂಡ ಹೇಳಿದೆ. ವೇದದ ಕರ್ಮಕಾಂಡದಲ್ಲಿ ಈ ರೀತಿಯ ಅವಿಶುದ್ಧಿ ದೋಷವು ಕಂಡು ಬರುತ್ತದೆ.
ಕ್ಷಯಾ – ‘ ಕ್ಷೀಣೆ ಪುಣ್ಯೇ ಮರ್ತ್ಯಲೋಕೇ ವಿಶಂತಿ” ಎಂಬಂತೆ ಪುಣ್ಯದ ಕ್ಷಯಾ ಕಂಡು ಬರುವುದು.
ಅತಿಶಯ – ತಾರತಮ್ಯವು ಕೂಡ ಕಂಡು ಬರುತ್ತದೆ.
ಹಾಗಾದರೆ ವೇದದಲ್ಲೂ ದುಃಖ ನಿವಾರಣೆಗೆ ದಾರಿಯಿಲ್ಲ. ದುಃಖ ನಿವಾರಣೆಗೆ ದಾರಿ ಯಾವುದು ? ಎಂದರೆ “ವ್ಯಕ್ತ-ಅವ್ಯಕ್ತ-ಜ್ಞಾ ವಿಜ್ಞಾನಾತ್”. ಈ ವಾಕ್ಯದಲ್ಲಿ ಸಾಂಖ್ಯಾ ದರ್ಶನದ ೨೫ ತತ್ವಗಳೂ ಅಡಕವಾಗಿದೆ. ಸಾಂಖ್ಯಾ ಎಂದರೆ “ಸಮ್ಯಕ್ ಖ್ಯಾತಂ” ( ಖ್ಯಾ ಪ್ರಖತನೇ ಧಾತು ). “ಯಾವುದನ್ನು ಬಹಳ ಚೆನ್ನಾಗಿ ಹೇಳಿದ್ದರೋ ” ಎಂದು ಅರ್ಥೈಸಬಹುದು ಅಥವಾ “ಸರಿಯಾದ ಜ್ಞಾನ” ಎಂದು ಕರೆಯಬಹುದು ಅಥವಾ “ಯಾವುದನ್ನು ಸಂಖ್ಯೆಗಳ ಮೂಲಕ ತಿಳಿಸಿದ್ದಾರೋ ” ಅದನ್ನು ಸಾಂಖ್ಯಾ ಎನ್ನಬಹುದು.
ಯಾರಿಗೆ ವ್ಯಕ್ತ- ಅವ್ಯಕ್ತ-ಜ್ಞಾ ಎಂಬ ೨೫ ತತ್ವಗಳ ಜ್ಞಾನವಿರುವುದೋ ಅಥವಾ ದೊರಕುವುದೋ ಅವರಿಗೆ ಮೋಕ್ಷ ಪ್ರಾಪ್ತಿ ಅಥವಾ ದುಃಖ ತ್ರಯದಿಂದ ಬಿಡುಗಡೆ ದೊರಕುತ್ತದೆ.
3. ಮೂಲಪ್ರಕೃತಿರವಿಕೃತಿರ್ಮಹದಾಧ್ಯ: ಪ್ರಕೃತಿ ವಿಕೃತಿಯ ಸಪ್ತ ।
ಷೋಡಶಕಸ್ತು ವಿಕಾರೊ ನ ಪ್ರಕೃತಿರ್ನವಿಕೃತಿ: ಪುರುಷ : ।।
ತ್ರಿವಿಧಂ ಪ್ರಮಾಣಮಿಷ್ಟ೦ ಪ್ರಮೇಯ ಸಿದ್ದಿ: ಪ್ರಮಾಣಾಧ್ದಿ ।।
ತಲ್ಲಿಂಗಲಿಂಗಿ ಪೂರ್ವಕಂ ಆಪ್ತಶ್ರುತಿರಾಪ್ತವಚನ೦ತು ।।