51. ಊಹ: ಶಬ್ದೋsಧ್ಯಯನಂ ದುಃಖ ವಿಘಾತಾನ್ ತ್ರಯ: ಸುಹೃತ್ ಪ್ರಾಪ್ತಿ: ।
ದಾನಂ ಚ ಸಿದ್ಧಯೋಷ್ಟೌ ಸಿದ್ಧೇ: ಪೂರ್ವಾಂಕುಶಸ್ತ್ರಿವಿಧ: ।।
ಊಹ: ಎಂದರೆ ಸರ್ವದಾ ವಿಚಾರ ಮಾಡುವುದು,ತರ್ಕ ಮಾಡುತ್ತಿರುವುದು,ಪರಮಾತ್ಮನೆಂದರೆ ಯಾರು? ಸತ್ಯಯಾವುದು? ನಿಶ್ರೇಯಸ್ ಏನು ? ಯಾರು ಹೀಗೆ ವಿಚಾರ ಮಾಡುತ್ತಿರುವರೋ ಅವರಿಗೆ ಜ್ಞಾನವಾಗುವುದು. ಅಂತಹವರಿಗೆ ಪ್ರಧಾನವು ಪುರುಷನಿಂದ ಬೇರೆ, ಅಹಂ ಇತ್ಯಾದಿ ಬೇರೆ ಎಂಬ ತತ್ವವು ತಿಳಿಯುತ್ತದೆ. ಇದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹೀಗೆ ಊಹಾಖ್ಯವೇ ಮೊದಲ ಸಿದ್ಧಿ.(ಯೋಗ ಶಾಸ್ತ್ರದಲ್ಲಿ ಇದನ್ನು ಸವಿಚಾರ ಸಿದ್ಧಿಯೆನ್ನುವರು)
ಶಬ್ದ ಕೇಳಿದ ಬಳಿಕ ವಿಚಾರ ಮಾಡಿ ತತ್ವವನ್ನು ಅರಿತಾಗ ಉಂಟಾಗುವ ಸಿದ್ಧಿಯು ಶಬ್ದಖ್ಯಾ ಸಿದ್ಧಿ.
ಅಧ್ಯಯನ ಸಿದ್ಧಿ – ಶಾಸ್ತ್ರವನ್ನು ಸರಿಯಾಗಿ ಓದಿ ಅರ್ಥಮಾಡಿಕೊಂಡು ತತ್ವವನ್ನು ಅರಿತಾಗ ಆಗುವ ಸಿದ್ಧಿಅಧ್ಯಯನ ಸಿದ್ಧಿ.
ದುಃಖ ವಿಘಾತ ತ್ರಯಂ – ಆಧ್ಯಾತ್ಮಿಕ,ಅಧಿಭೌತಿಕ, ಅಧಿದೈವಿಕ ದುಃಖದಿಂದ ಬಳಲಿ,ಗುರುವಿನ ಬಳಿ ಬಂದು, ತತ್ವವನ್ನು ಅರಿತು ಅದರಿಂದ ಮುಕ್ತಿ ಹೊಂದುವುದು ದುಃಖವಿಘಾತತ್ರಯ ಸಿದ್ಧಿ ಎನ್ನುವರು.
ಮೂರು ಈ ರೀತಿ ದುಃಖವನ್ನು, ೩ ರೀತಿಯ ಕಲ್ಪನೆಯಿಂದ ದೂರ ಮಾಡುವುದರಿಂದ ಇದು ಷಟ್ ಸಿದ್ಧಿಯಾಗುವುದು.
ಸುಹೃತ್ ಪ್ರಾಪ್ತಿ – ಒಳ್ಳೆಯ ಮನುಷ್ಯ ಅಥವಾ ಜ್ಞಾನಿಯಾದ ಸ್ನೇಹಿತನಿಂದ ಬೋಧನೆ ಕೇಳಿ ಜ್ಞಾನ ಪ್ರಾಪ್ತಿಯಾದರೆ ಅದನ್ನು ಸುಹೃತ್ ಪ್ರಾಪ್ತಿಯೆನ್ನುವರು.
ದಾನಂ – ಯಾರು ಭಗವತ್ ಸೇವೆಯನ್ನು ದಾನದ ಮೂಲಕ ಅಂದರೆ ಬಟ್ವೆ,ಕಮಂಡಲ,ಔಷಧಿ ಇತ್ಯಾದಿಯ ದಾನ ಮಾಡುವುದರಿಂದ ದಾನ ತೆಗೆದು ಕೊಳ್ಳುವವರಿಂದ ಭೋದನೆಯನ್ನು ಕೇಳಿ ಜ್ಞಾನ ಪ್ರಾಪ್ತಿಯಾದರೆ ಅದು ಎಂಟನೆಯ ಸಿದ್ಧಿ.
ಯೋಗ ಸೂತ್ರದಲ್ಲೂ ಈ ಎಂಟು ಸಿದ್ಧಿಯ ಉಲ್ಲೇಖವಿದೆ.
ಈ ಎಂಟು ಸಿದ್ಧಿಯ ವಿಪರೀತದಿಂದ ಉಂಟಾಗುವ ಅಶಕ್ತಿಯನ್ನು ಸಿದ್ಧಿಖ್ಯಾ ಅಶಕ್ತಿ ಎನ್ನುವರು.
ವಿಪರ್ಯಾಯ,ಅಶಕ್ತಿ ಮತ್ತು ತುಷ್ಟಿ ಇವು ಅಪವರ್ಗ/ಸಿದ್ಧಿಗೆ ತಡೆಯಾಗಿದೆ.
ಹೇಗೆ ಆನೆಯು ಅಂಕುಶದಲ್ಲಿ ಬದ್ಧವಾಗುತ್ತದೆ ಹಾಗೆಯೇ ಯಾರು ವಿಪರ್ಯಾಯ,ಅಶಕ್ತಿ ಮತ್ತು ತುಷ್ಟಿಯಲ್ಲಿ ಬದ್ಧರಾಗಿರುವರೋ ಅವರಿಗೆ ಮೋಕ್ಷ ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಇದರಿಂದ ಮುಕ್ತರಾಗ ಬೇಕು.
ಯಾವಾಗ ಸಿದ್ಧಿ ಪ್ರಾಪ್ತಿಯಾಗುವುದೋ ಆಗ ಮೋಕ್ಷವಾಗಿರಲೇಬೇಕು.ಪೂರ್ವದಲ್ಲಿ ಹೇಳಿದಂತೆ ‘ಭಾವೈರಧಿವಾಸಿತಂ ಲಿಂಗಂ’ ಎಂಬಲ್ಲಿ ಭಾವವೇನು? ಧರ್ಮ, ಜ್ಞಾನ, ಅಜ್ಞಾನ ಇತ್ಯಾದಿ. ಇದು ಬುದ್ಧಿ ಸಂಬಂಧಿಯಾಗಿದೆ. ಹಾಗೆಯೇ ವಿಪರ್ಯಾಯ ಅಶಕ್ತಿ ಮತ್ತು ತುಷ್ಟಿಯು ಕೂಡ ಬುದ್ಧಿ ಸಂಬಂಧಿತವಾಗಿದೆ. ಭಾವದಿಂದಲೇ ‘ಪ್ರತ್ಯಯ ಸರ್ಗ:’ ಅಂದರೇ ಸೃಷ್ಟಿಯಾಗುವುದು ಮತ್ತು ಜ್ಞಾನವಾಗುವುದು.ಲಿಂಗವೆಂದರೆ ತನ್ಮಾತ್ರೆ ಇತ್ಯಾದಿ ಪುರುಷನನ್ನು ಹೊರೆತುಪಡಿಸಿ ಚತುರ್ದಶವನ್ನು ಲಿಂಗವೆನ್ನುವರು.
ಹೀಗೆ ಎರಡು ಸರ್ಗವನ್ನು ಹೇಳಿದ್ದಾರೆ.
ಒಂದು ಪ್ರತ್ಯಯ ಸರ್ಗ ಮತ್ತು ಇನ್ನೊಂದು ಲಿಂಗ ಸರ್ಗ. ಒಂದು ಸರ್ಗದಿಂದಲೇ ಪುರುಷಾರ್ಥ ಸಿದ್ಧಿಯಾದರೆ ಎರಡು ಸರ್ಗದ ಕಲ್ಪನೆ ಮಾಡುವ ಅವಶ್ಯಕತೆ ಏನು ?
52. ನವಿನಾಭಾವೈರ್ಲಿಂಗಂ ನ ವಿನಾ ಲಿಂಗೇನ ಭಾವ ನಿವೃತ್ತಿ: ।
ಲಿಂಗಾಖ್ಯೋ ಭಾವಾಖ್ಯ: ತಸ್ಮಾದ್ ದ್ವಿವಿಧ: ಪ್ರವರ್ತತೆ ಸರ್ಗ: ।।
ಭಾವವಿಲ್ಲದ ಲಿಂಗ ಶರೀರ(ಲಯಯುಕ್ತ) ಇರುವುದಕ್ಕೆ ಸಾಧ್ಯವಿಲ್ಲ. ಹೇಗೆಂದರೆ ಸಂಸ್ಕಾರದ ಕಾರಣದಿಂದಲೇ ಸೃಷ್ಟಿಯಾಗುವುದು, ಜೀವ ಬದ್ಧವಾಗುವುದು.ಜೀವ ಬದ್ಧವಾಗಿರುವುದರಿಂದಲೇ ಜೀವದ ಉಪಯೋಗಕ್ಕಾಗಿ ಲಯ ಸೃಷ್ಟಿಯಾಗುವುದು. ಲಯ ಸೃಷ್ಟಿಯಾಗಲು ಸಂಸ್ಕಾರವು ಇರಲೇಬೇಕು. ಪೂರ್ವ ಸಂಸ್ಕಾರದಿಂದಲೇ ಉತ್ತರೋತ್ತರ ದೇಹ ಪ್ರಾಪ್ತಿ ದೇಹ ಉಪಭೋಗಕ್ಕಾಗಿ ಲೌಕಿಕ ಸೃಷ್ಟಿಯಾಗಲೇ ಬೇಕು. ಭಾವವು ಜ್ಞಾನ ಸೃಷ್ಟಿ,ಲಿಂಗವು ವಿಷಯ ಸೃಷ್ಟಿ. ಭಾವವು ಸಂಸ್ಕಾರವು ಅದರ ಉಪಯೋಗಕ್ಕಾಗಿ ಲಿಂಗ ಸೃಷ್ಟಿಯು ಅನಿವಾರ್ಯ. ಅದೇ ರೀತಿ ಲಿಂಗ ಸೃಷ್ಟಿಯು ವಿಷಯವು ಮತ್ತು ಇಂದ್ರಿಯವು ಸಂಸ್ಕಾರವಿಲ್ಲದೆ ಪ್ರವೃತ್ತಿ ಹೊಂದಲು ಸಾಧ್ಯವಿಲ್ಲ.
ಬೀಜಾಂಕುರ ನ್ಯಾಯದಂತೆ ಭಾವ ಲಿಂಗ ಸರ್ಗ ಯಾವುದು ಮೊದಲು ಎಂದು ಹೇಳಲು ಬರದು ಭಾವ ಲಿಂಗ ಸರ್ಗವು ಅನಾದಿ ಆಗಿದೆ.
ಸೃಷ್ಟಿಯ ಆರಂಭದಲ್ಲಿ ಜಾತಿಖ್ಯಾ ಸಂಸ್ಕಾರವೇ ಅವಶ್ಯ ವ್ಯಕ್ತಿಖ್ಯಾ ಸಂಸ್ಕಾರದ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಭಾವ ಮತ್ತು ಲಿಂಗ ಎರಡು ಸರ್ಗದ ಅವಶ್ಯಕತೆಯಿದೆ.
53. ಅಷ್ಟ ವಿಕಲ್ಪೋ ದೇವಸ್ತೈರ್ಯಗ್ಯೋನಶ್ಚ ಪಂಚಧಾ ಭವತಿ ।
ಮಾನುಷಕಶ್ಟೈಕ ವಿಧ: ಸಮಾಸತೋ ಭೌತಿಕ: ಸರ್ಗ: ।।
ದೇವತೆಗಳು ಅಷ್ಟ ವಿಧ ಬ್ರಾಹ್ಮ, ಪ್ರಾಜಪತ್ಯ, ಸೌಮ್ಯ, ಐಂದ್ರ, ಗಾಂಧರ್ವ,ಯಕ್ಷ್ಮ, ರಾಕ್ಷಸ, ಪೈಶಾಚ.
ತಿರ್ಯಗ್ ಗಳು ಪಶು, ಮೃಗ, ಪಕ್ಷಿ, ಸರಿಸೃಪ, ಸ್ಥಾವರಾಣಿ ಪಂಚವಿಧ.
ಮನುಷ್ಯ ಯೋನಿಯು ಒಂದೇ ಆಗಿದೆ.
ಇವೆೇ ಚತುರ್ದಶ ಸೃಷ್ಟಿಯಾಗಿದೆ. ಮುಖ್ಯವಾಗಿ ದೇವ,ಮನುಷ್ಯ ಮತ್ತು ತೈರ್ಯಗ್ ಎಂದು ೩ ವಿಧವಾಗಿದೆ.
ದೇವತೆಗಳಿಗೆ ದೇವಲೋಕ, ಮನುಷ್ಯರಿಗೆ ಮಧ್ಯಲೋಕ(ಮರ್ತ್ಯು ಲೋಕ ) ಮತ್ತು ತೈರ್ಯಗ್ ಅಧೋ ಲೋಕವೆಂದು ಹೇಳುತ್ತಾರೆ.
ಯಾವ ಲೋಕದಲ್ಲಿ ಯಾವ ಗುಣ ಅಧಿಕ್ಯವು ?
54. ಊರ್ಧ್ವ ಸತ್ವ ವಿಶಾಲ:,ತಮೋ ವಿಶಾಲಶ್ಚ ಮೂಲತಃ ಸರ್ಗ: ।
ಮಧ್ಯೆ ರಜೋ ವಿಶಾಲೋ ಬ್ರಹ್ಮಾದಿಸ್ತಂಭ -ಪರ್ಯಂತ: ।।
ಊರ್ಧ್ವ ಲೋಕದಲ್ಲಿ ಅಷ್ಟ ದೇವ ಸ್ಥಾನದಲ್ಲಿ ಸತ್ವವು ಉತ್ಕಟವಾಗಿದೆ. ರಜೋಗುಣ ಮತ್ತು ತಮೋಗುಣವು ಕಡಿಮೆ ಇರುವುದು. ಇದರಿಂದ ಅಲ್ಲಿ ಕೂಡ ತರತಮ್ಯವಿರುತ್ತದೆ.
ಅಧೋಲೋಕ ಅಥವಾ ತೈರ್ಯಗ್ ಯೋನಿಯಲ್ಲಿ ತಮವು ಅಧಿಕವಾಗಿದೆ.ಅಲ್ಲಿ ಸತ್ವ ಮತ್ತು ರಜ ಕಡಿಮೆ ಪ್ರಮಾಣದಲ್ಲಿರುತ್ತದೆ.
ಮನುಷ್ಯಲೋಕದಲ್ಲಿ ರಜೋಗುಣವು ಅಧಿಕ್ಯವಾಗಿರುತ್ತದೆ. ಅಲ್ಲಿ ಕೂಡ ಸತ್ವ ಮತ್ತು ತಮೋಗುಣವಿರುತ್ತದೆ.
ಹೀಗೆ ಬ್ರಹ್ಮಾದಿಯಿಂದ ಸ್ಥಾವರದ ವರೆಗೆ ಗುಣ ಪರಿಣಾಮದಿಂದ ವ್ಯತ್ಯಾಸವನ್ನು ಕಾಣಬಹುದು. ಹೀಗೆ ಅಭೌತಿಕ ಸರ್ಗ, ಲಿಂಗ ಸರ್ಗ, ಭಾವ ಸರ್ಗ,ಭೂತ ಸರ್ಗ, ದೈವ-ಮನುಷ್ಯ-ತೈರ್ಯಗ್ ಯೋನಿಯಾಗಿ ಪ್ರಧಾನದಿಂದ ಆದ ೧೬ ವಿವಿಧ ಸರ್ಗಗಳು.
55. ತತ್ರ ಜರಾಮರಣಕೃತಂ ದುಃಖಂ ಪ್ರಾಪ್ನೋತಿ ಚೇತನ: ಪುರುಷ: ।
ಲಿಂಗಸ್ಯೌ ವಿನಿವೃತ್ತೆ: ತಮಸಾದ್ ದುಃಖಂ ಸ್ವಭಾವೇನ ।।
ಇಲ್ಲಿ ಜರಾಮರಣದ ದುಃಖವನ್ನು ಚೇತನವಾದ ಪುರುಷನೇ ಅನುಭವಿಸುತ್ತಾನೆ. ಪ್ರಧಾನವಾಗಲಿ ಅಹಂ ಆಗಲಿ,ಬುದ್ಧಿಯಾಗಲಿ, ತನ್ಮಾತ್ರೆಯಾಗಲಿ, ಇಂದ್ರಿಯವಾಗಲಿ, ಮಹಾಭೂತಗಳಾಗಲಿ ಅನುಭವಿಸುವುದಿಲ್ಲ.
ಎಲ್ಲಿಯವರೆಗೆ ಈ ದುಃಖವೆಂದರೆ.
ಎಲ್ಲಿಯ ತನಕ ಪುರುಷನು ಬೇರೆ ಪ್ರಧಾನವು ಬೇರೆ ಪ್ರಧಾನದ ಸೃಷ್ಟಿಯು ಬೇರೆಯೆನೆಂಬ ಜ್ಞಾನ ಉಂಟಾಗುವುದಿಲ್ಲವೋ ಅಲ್ಲಿಯ ವರೆಗೆ ೩ ಲೋಕದಲ್ಲಿ ಬೇರೆ ಬೇರೆ ಯಾದ ದುಃಖ ಪ್ರಾಪ್ತಿಯಾಗಿರುತ್ತಿರುತ್ತದೆ. ಲಿಂಗ ನಿವೃತ್ತಿಯೇ ಮೋಕ್ಷವು. ಮೋಕ್ಷ ಪ್ರಾಪ್ತಿಯಾದರೆ ದುಃಖವಿರುವುದಿಲ್ಲ.
ಪ್ರಕೃತಿ ಯಾವ ಕಾರಣಕ್ಕಾಗಿ ಸೃಷ್ಟಿ ಮಾಡುತ್ತದೆ ?