41. ಚಿತ್ರಂ ಯಥಾಶ್ರಯಮೃತೇ ಸ್ಥಾಣವದಿಭ್ಯೋ ವಿನಾಯಥಾ ಛಾಯಾ।
ತದ್ವದ್ವಿನಾ ವಿಶೇಷೈರ್ನ ತಿಷ್ಠತಿ ನಿರಾಶ್ರಯ ಲಿಂಗಮ್ ।।
ಹೇಗೆ ಭಿತ್ತಿ ಅಥವಾ ಗೋಡೆಯಿಲ್ಲದೆ ಚಿತ್ರವಿರುವುದಿಲ್ಲವೋ ಮತ್ತು ಸ್ಥಾಣುವಿಲ್ಲದೆ ನೆರಳು ಇರುವುದಿಲ್ಲವೋ ಹಾಗೆ ತಣ್ಣಗಿಲ್ಲದೆ ಜಲವು, ಉಷ್ಣವಿಲ್ಲದೆ ಅಗ್ನಿಯು, ಸ್ಪರ್ಶವಿಲ್ಲದೆ ವಾಯು, ಅವಕಾಶವಿಲ್ಲದೆ ಆಕಾಶವಿರಲಾರದು.
ಈ ರೀತಿಯ ನ್ಯಾಯದಿಂದ ಅವಿಷೇಶವು(ಸರ್ವ ಸಾಮಾನ್ಯ-ತನ್ಮಾತ್ರೆ) ಸೂಕ್ಷ್ಮ ಶರೀರವಿಲ್ಲದೆ ಇರುವುದಿಲ್ಲ ಹಾಗೆಯೇ ವಿಶೇಷವಾದ ಪಂಚ ಮಹಾಭೂತದ ಶರೀರಕ್ಕೂ ಆಶ್ರಯವಿರಬೇಕಾಗುತ್ತದೆ. ಆದ್ದರಿಂದ ನಿರಾಶ್ರಯ ಲಿಂಗವಿರುವುದಿಲ್ಲ.
42. ಪುರುಷಾರ್ಥ ಹೇತುಕಮಿದಂ ನಿಮಿತ್ತ ನೈಮಿತ್ತಿಕ ಪ್ರಸ೦ಗೇನ ।
ಪ್ರಕೃತೇರ್ವಿಭುತ್ವ ಯೋಗಂ ನಟವದ್ ವ್ಯವತಿಷ್ಠತೆ ಲಿಂಗಮ್ ।।
ಪುರುಷಾರ್ಥಕವಾಗಿ ಪ್ರಧಾನವು ಪ್ರವೃತ್ತಿ ಹೊಂದುತ್ತದೆ. ಇದರಲ್ಲಿ ಎರೆಡು ವಿಧ :
೧)ಶಬ್ದಾದಿ ಉಪಲಬ್ಧಿ ಲಕ್ಷಣ(ಭೋಗ) ೨) ಗುಣ ಪುರುಷಾಂತರ ಉಪಲಬ್ಧಿ ಲಕ್ಷಣ(ಮೋಕ್ಷ).
ಶಬ್ದಾದಿ ಉಪಲಬ್ಧಿ ಲಕ್ಷಣದಲ್ಲಿ ಬ್ರಹ್ಮಾದಿ ಲೋಕದಿಂದ ಯಾವಯಾವ ಅನುಭವದ ಸಾಧನವಿದೆಯೋ ಅದನ್ನೆಲ್ಲ ಪುರುಷನ ಭೋಗಕ್ಕಾಗಿ ಪ್ರಾಪ್ತಿ ಮಾಡಿಸುವುದು.
ಗುಣಪುರುಷಾಂತರ ಉಪಲಬ್ಧಿಯು ಗುಣವು ಬೇರೆ ಪುರುಷನು ಬೇರೆ ಎಂಬ ಜ್ಞಾನದಿಂದ ಮೋಕ್ಷ ಕೊಡಿಸುವುದು.
ಆದ್ದರಿಂದ ಸೂಕ್ಷ್ಮ ಶರೀರವು ಪುರುಷಾರ್ಥ ಹೇತುಕವಾಗಿದೆ. ನಿಮಿತ್ತವೆಂದರೆ ಧರ್ಮ ಮತ್ತು ಅಧರ್ಮವು, ನೈಮಿತ್ತಿಕವೆಂದರೆ ಊರ್ಧ್ವಲೋಕ ಪ್ರಾಪ್ತಿ ಇತ್ಯಾದಿ.
ಒಬ್ಬ ನಟನು ರಾಜನ ಮುಂದೆ ಹೇಗೆ ರಾಜನ ಇಚ್ಛೆಯಂತೆ ನಟಿಸುತ್ತಾನೋ ಹಾಗೆಯೆ ಪ್ರಧಾನವು ವಿಭುವಾದ ಪುರುಷನ ಮುಂದೆ ನಟಿಸುತ್ತದೆ.
ಹೇಗೆ ನಟನು ಪರದೆಯ ಹಿಂದೆ ಹೋಗಿ ವೇಷ ಬದಲಾಯಿಸಿ ಬರುತ್ತಾನೆ ಹಾಗೆ ಈ ಸೂಕ್ಷ್ಮ ಶರೀರವು ಧರ್ಮ-ಅಧರ್ಮ ಇತ್ಯಾದಿ ಸಂಬಂಧದಿಂದ ಏನು ಪ್ರರಾಬ್ಧವಿದೆಯೋ ಅದರ ಮೇಲೆ ಆಧಾರಿತವಾಗಿ ಪುರುಷನ ಭೋಗಕ್ಕಾಗಿ ಬೇರೆ ಬೇರೆ ಶರೀರ ಪ್ರಾಪ್ತಿ ಮೂಡಿಸುತ್ತದೆ.
‘ಭಾವೈರಧಿವಾಸಿತಂ ಸಂಸರತಿ ಇತಿ ಲಿಂಗಮ್’ ಎಂದು ಪೂರ್ವದಲ್ಲಿ ಹೇಳಿದಂತೆ ಅನ್ಯ ಅನ್ಯ ಭಾವದಿಂದ ಸೂಕ್ಷ್ಮ ಶರೀರ ಅನುಭವವು ಪ್ರಾಪ್ತಿಯಾಗುತ್ತದೆ.
ಭಾವವೆಂದರೇನು?
43.ಸಾಂಸಿದ್ಧಕಾಶ್ಚ ಭಾವಾ: ಪ್ರಾಕೃತಿಕ ವೈಕೃತಾಶ್ಚ ಧರ್ಮಾಧ್ಯಾ: ।
ದೃಷ್ವಾ: ಕರಣಾಶ್ರಯಿಣ: ಕಾರ್ಯಾಶ್ರಯಿಣಶ್ಚ ಕಲಲಾಧ್ಯಾ: ।।
ಭಾವವು ೩ ವಿಧವಾಗಿ ನೋಡಬಹುದು
೧)ಸಾಂಸಿದ್ಧಕ ೨)ಪ್ರಾಕೃತಿಕ ೩)ವೈಕೃತ
ಸಾಂಸಿದ್ಧಿಕ ಎಂದರೆ ಯಾವುದು ಸ್ವರೂಪ ಭೂತವಾಗಿರುವುದೋ ಅದು. ಉದಾ : ಭಗವಾನ್ ಕಪಿಲ ಮಹರ್ಷಿ ಜನನದೊಂದಿಗೆ ಧರ್ಮ,ಜ್ಞಾನ,ಐಶ್ವರ್ಯ ಇತ್ಯಾದಿ ಸಾಂಸಿದ್ಧಿಕವಾಗಿತ್ತು.
ಪ್ರಾಕೃತಿಕ : ಸನಕ,ಸನಾದಿಗಳಿಗೆ ಹುಟ್ಟುತ್ತಲೇ ಹದಿನಾರು ವರ್ಷ ತುಂಬಿತ್ತು.ಆಗ ಅವರಿಗೆ ಧರ್ಮಾದಿ ಗುಣಪ್ರಾಪ್ತಿಯಾಯಿತು. ಇದಕ್ಕೆ ಪ್ರಾಕೃತಿಕ ಎನ್ನುತ್ತಾರೆ.
ವೈಕೃತ : ಆಚಾರ್ಯರಿಂದ ಸಾಂಖ್ಯಾಯೋಗದ ಪ್ರಾಪ್ತಿಯಾಗುವುದರಿಂದ ಜ್ಞಾನ,ವೈರಾಗ್ಯ,ಧರ್ಮ,ಐಶ್ವರ್ಯ ಉಂಟಾಗುತ್ತದೆ.ಆಚಾರ್ಯರಿಗೂ ಅವರ ಆಚಾರ್ಯದಿಂದ ಜ್ಞಾನ,ವೈರಾಗ್ಯ ಇತ್ಯಾದಿ ಪ್ರಾಪ್ತಿಯಾದ್ದರಿಂದ ಇದನ್ನು ವೈಕೃತವೆನ್ನುತ್ತಾರೆ.
ಇದರ ಆಧಾರದ ಮೇಲೆ ಲಿಂಗ ಶರೀರವು ಸಂಸಾರದಲ್ಲಿರುತ್ತದೆ. ಈ ನಾಲ್ಕು ಭಾವವೇನಿದೆ ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯ ಇದನ್ನು ಸಾತ್ವಿಕ ಭಾವವೆನ್ನುವರು. ತಾಮಸವು ಇದರ ವಿಪರೀತವಾಗಿದೆ. ಹೀಗಾಗಿ ಭಾವವು ೮ ಆಗುವುದು.(ಸಾತ್ವಿಕ+ತಾಮಸ ಭಾವ)
ಈ ೮ ಭಾವವು ಎಲ್ಲಿ ಪ್ರವೃತ್ತಿ ಹೊಂದುತ್ತದೆ?
ಬುದ್ಧಿಯ ಆಶ್ರಯದಲ್ಲಿ ಇದು ಇರುತ್ತದೆ. ಅದುಹೇಗೆ ಅಂದರೆ ‘ಅಧ್ಯಾವಸಾಯೋ ಬುದ್ಧಿರ್ಧರ್ಮ ಜ್ಞಾನಂ ‘ ಎಂದು ಮೊದಲೇ ಹೇಳಿಯಾಗಿದೆ.
ಹಾಗಾದರೆ ಕಾರ್ಯಾಶ್ರಯವೇನು? ಕಲಲಾಧ್ಯ: ಅಂದರೆ ಶುಕ್ರ-ಶೋನಿತ ಸಂಯೋಗದಿಂದ ಉಂಟಾಗುವ ಮೊದಲ ಸ್ಥಿತಿಯನ್ನು ಕಲಲಾ ಎನ್ನುತ್ತಾರೆ. ಆಮೇಲೆ ಉದ್ಭುಧ, ಅದರಿಂದ ಮಾಂಸ ಯುಕ್ತವಾಗುತ್ತದೆ. ಇದರಿಂದ ಅನ್ನಾದಿ ವಿಷಯ ಭೋಗ ನಿಮಿತ್ತ ಉತ್ಪನ್ನವಾಗುತ್ತದೆ.
ನಿಮಿತ್ತ-ನೈಮಿತ್ತಿಕವನ್ನು ವಿವರಿಸಿ ಎಂದರೆ?
44.ಧರ್ಮೇಣ ಗಮನ ಮೂರ್ಧ್ವಂ ಗಮನಂ ಅಧತ್ಸಾದ್ ಭವತಿ ಅಧರ್ಮೇನ ।
ಜ್ಞಾನೇನ ಚಾಪವರ್ಗೋ ವಿರ್ಪಯಾಯಾದಿಷ್ಯತೇ ಬಂಧ: ।।
ಧರ್ಮ ನಿಮಿತ್ತವಾಗಿ ಊರ್ಧ್ವಗಮನವಾಗುತ್ತದೆ. ಊರ್ಧ್ವಂ ಎಂದರೆ ೮ ಲೋಕವಾದ ಬ್ರಹ್ಮ ಪ್ರಾಜಾಪತ್ಯ, ಸೌಮ್ಯ, ಐಂದ್ರ, ಗಾಂಧರ್ವ, ರಾಕ್ಷಸ ಪೈಶಾಚ ಲೋಕಗಳು. ಈ ಲೋಕಗಳಲ್ಲಿ ಸೂಕ್ಷ್ಮ ಶರೀರವು ಧರ್ಮದಿಂದ ಪ್ರಾಪ್ತಿಯಾಗುತ್ತದೆ. ಪಶು, ಮೃಗ, ಪಕ್ಷಿ, ಸರಿಸೃಪ , ಸ್ಥಾವರ, ಅಂತೇಷು. ಇವು ಅಧರ್ಮದಿಂದ ಪ್ರಾಪ್ತಿಯಾಗುತ್ತದೆ.
ಅಷ್ಟೇ ಅಲ್ಲ, ಜ್ಞಾನದಿಂದ ಅಪವರ್ಗ ಪ್ರಾಪ್ತಿಯಾಗುತ್ತದೆ. ಅಪವರ್ಗವೆಂದರೆ ಮೋಕ್ಷ, ೨೫ ತತ್ವಗಳ ಜ್ಞಾನ ನಿಮಿತ್ತದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಅದರಿಂದ ಸೂಕ್ಷ್ಮ ಶರೀರವು ನಿವೃತ್ತಿ ಹೊಂದುತ್ತದೆ. ನಿವೃತ್ತಿಯಾದ ಮೇಲೆ ಅದರಿಂದ ಬಂಧವು ಇರಲಾರದು. ಈ ಸ್ಥಿತಿಯನ್ನು ‘ಪರಮಾತ್ಮ’ವೆನ್ನುವರು.ಇದರ ವಿಪರೀತವನ್ನು ಬಂಧನವೆನ್ನುತ್ತಾರೆ.
ಅಜ್ಞಾನವೇ ಅದರ ನಿಮಿತ್ತವಾಗಿದೆ. ಅಜ್ಞಾನದಿಂದ ೩ ರೀತಿಯ ಬಂಧ ಉಂಟಾಗುತ್ತದೆ.
೧)ಪ್ರಾಕೃತಿಕ ೨)ವೈಕೃತ ೩)ದಾಕ್ಷಿಣ
ಈ ರೀತಿಯ ೩ ಅಜ್ಞಾನದಿಂದ ಉಂಟಾದ ಬಂಧನಕ್ಕೆ ಒಳಪಟ್ಟವರಿಗೆ ಬೇರೆ ದಾರಿಯೇ ಇಲ್ಲ.
ಸಾಂಖ್ಯ ಒಂದೇ ದಾರಿ.
45.ವೈರಾಗ್ಯಾತ್ ಪ್ರಕೃತಿಲಯ:, ಸಂಸಾರೋ ಭವತಿ ರಾಜಸಾದ್ರಾಗಾತ್ ।
ಐಶ್ವರ್ಯಾತ್ ಅಭಿಘಾತ, ವಿಪರ್ಯಯಾ ತದ್ ವಿಪರ್ಯಸ್ಯ ।।
ನಿಮಿತ್ತವು ಅನ್ಯವು ಇದೇ. ಜ್ಞಾನದಿಂದ ಮೋಕ್ಷವಾಗುತ್ತದೆ ಅಜ್ಞಾನದಿಂದ ಬಂಧನವು.
ಹಾಗೆ ವೈರಾಗ್ಯದಿಂದ ಪ್ರಕೃತಿ ಲಯವಾಗುತ್ತದೆ. ರಾಜಸ ರಾಗದಿಂದ ಸಂಸಾರ ಉಂಟಾಗುತ್ತದೆ.
ಐಶ್ವರ್ಯದಿಂದ ಅಭಿಘಾತ (ಅಷ್ಟಸಿದ್ಧಿ) ಪ್ರಾಪ್ತಿಯಾಗುತ್ತದೆ.
ಇದರ ವಿಪರೀತದಿಂದ ವಿಪರ್ಯಯಾ ವಾಗುತ್ತದೆ